#BharatJodoYatra | ಇದು ಭಾರತ್ ಜೋಡೋ ಯಾತ್ರೆಯ ಪಂಚ ಸೂತ್ರಗಳು
ಬೆಂಗಳೂರು : ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣವಾಗಬೇಕು. ದೇಶವು ಬೆಲೆಯೇರಿಕೆಯಿಂದ ಮುಕ್ತವಾಗಬೇಕು. ಯುವಕರಿಗೆ ಉದ್ಯೋಗ ಸಿಗಬೇಕು, ಭ್ರಷ್ಟಾಚಾರ ಮುಕ್ತ ಸರ್ಕಾರ ಹಾಗೂ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಇದು ಭಾರತ್ ಜೋಡೋ ಯಾತ್ರೆಯ ಪಂಚ ಸೂತ್ರಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಎಂ ಬಿ ಪಾಟೀಲ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕಾಂಗ್ರೆಸ್ ನಾಯಕರು ಭಾರತ ಐಕ್ಯತಾ ಯಾತ್ರೆಯ ಲೋಗೋ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಉದಯಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಕೈಗೊಂಡ ನಿರ್ಣಯದಂತೆ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳುತ್ತಿದ್ದು 12 ರಾಜ್ಯಗಳನ್ನು ಈ ಯಾತ್ರೆ ಹಾದುಹೋಗಲಿದೆ.

ಪ್ರಾದೇಶಿಕತೆಗೆ ತಕ್ಕಂತೆ ಯಾತ್ರೆಯ ಹೆಸರನ್ನು ಭಾರತ ಐಕ್ಯತಾ ಯಾತ್ರೆ ಎಂದು ಬದಲಿಸಿಕೊಳ್ಳಲಾಗಿದ್ದು, 21 ದಿನಗಳ ಕಾಲ ಈ ಯಾತ್ರೆಯು ರಾಜ್ಯದಲ್ಲಿ ಸಾಗಲಿದೆ. ತಮಿಳುನಾಡಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ಬಂದು ನಂತರ ನಂಜನಗೂಡು, ಮೈಸೂರು, ಮೇಲುಕೋಟೆ, ತುರುವೇಕೆರೆ, ಹಿರಿಯೂರು, ಚಳ್ಳಕೆರೆ, ಬಳ್ಳಾರಿ ಮತ್ತು ರಾಯಚೂರು ತಲುಪಲಿದೆ.
ರಾಹುಲ್ ಗಾಂಧಿ ಅವರು ಪ್ರತಿದಿನ 25 ಕಿ.ಮೀ. ಹೆಜ್ಜೆ ಹಾಕಲಿದ್ದಾರೆ. ಕರ್ನಾಟಕದಲ್ಲಿ ನಡೆಯುವ ಈ ಯಾತ್ರೆಯನ್ನು ದೇಶಕ್ಕೇ ಮಾದರಿಯಾಗಿಸಬೇಕೆಂದು ನಾಯಕರು, ಕಾರ್ಯಕರ್ತರು ಹಾಗೂ ಜನರಲ್ಲಿ ಪ್ರಾರ್ಥಿಸುತ್ತೇನೆ. ಪಂಚ ಸೂತ್ರಗಳ ಉದ್ದೇಶವನ್ನಿಟ್ಟುಕೊಂಡು ಈ ಯಾತ್ರೆಯು ದೇಶಾದ್ಯಂತ ಸಾಗಲಿದೆ.
ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣವಾಗಬೇಕು. ದೇಶವು ಬೆಲೆಯೇರಿಕೆಯಿಂದ ಮುಕ್ತವಾಗಬೇಕು. ಯುವಕರಿಗೆ ಉದ್ಯೋಗ ಸಿಗಬೇಕು, ಭ್ರಷ್ಟಾಚಾರ ಮುಕ್ತ ಸರ್ಕಾರ ಹಾಗೂ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.








