ಕೊಪ್ಪಳ: ‘ಭ್ರಷ್ಟಾಚಾರದ ಪಿತಾಮಹರೇ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ನಡೆಸುತ್ತಿರುವ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತಂದೆ ಯಾಕೆ ಜೈಲಿಗೆ ಹೋಗಿದ್ದರು? ಅಕ್ರಮಗಳ ಹಿನ್ನೆಲೆ ಜೈಲು ಪಾಲಾಗಿದ್ದ ಜನಾರ್ದನರೆಡ್ಡಿ ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ? ಎಂಬುದನ್ನು ಉತ್ತರಿಸಲಿ’ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್. ತಂಗಡಗಿ ಅವರು
ಸವಾಲು ಹಾಕಿದ್ದಾರೆ.
ಬಿಜೆಪಿಯವರು ಪಾದಯಾತ್ರೆ ಯಾಕೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಭ್ರಷ್ಟಾಚಾರದ ವಿಷಯವನ್ನಿಟ್ಟುಕೊಂಡು ಪಾದಯಾತ್ರೆ ಮಾಡಲಿ. ರಾಜ್ಯಾದ್ಯಂತ ಬರ ಆವರಿಸಿದೆ. ಕೇಂದ್ರದ ವಿರುದ್ಧ ಬರ ಪರಿಹಾರ ನೀಡುವಂತೆ ಒತ್ತಾಯಿಸಿ ಪಾದಯಾತ್ರೆ ಮಾಡಲಿ. ಅದನ್ನು ಬಿಟ್ಟು ರಾಜಕೀಯ ಮಾಡಲು ಮಾಡಬಾರದು ಎಂದರು.
ಇವರಿಗೆ ಸದನದಲ್ಲಿ ಜನರ ಸಮಸ್ಯೆಗಳ ಚರ್ಚೆ ಮಾಡಲು ಸಮಯವಿಲ್ಲ. ರೈತರು ಹಾಗೂ ಬಡವರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಇವರಿಗೆ ಬೇಕಾಗಿರುವುದು ಕೇವಲ
ರಾಜಕಾರಣ. ನೂರಕ್ಕೆ ನೂರು ಇದು ಬಿಜೆಪಿಯವರ ಪಾದಯಾತ್ರೆಯಲ್ಲ. ಇದು ಪಶ್ಚಾತ್ತಾಪದ ಯಾತ್ರೆ. ಎಲ್ಲಾ ಭ್ರಷ್ಟಾಚಾರಿಗಳು, ರಾಜ್ಯದ ವಿರುದ್ಧ ಕೆಲಸ ಮಾಡಿದವರು ಸೇರಿಕೊಂಡು ಈ ಪಶ್ಚಾತ್ತಾಪದ ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಕಿಡಿ ಕಾರಿದರು.
ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಿಸಿದ್ದು ಯಾರು?
ಕೇಂದ್ರ ಸಚಿವ ಸೋಮಣ್ಣ ಅವರು ಪಾದಯಾತ್ರೆಯ ಬಗ್ಗೆ ವಿರೋಧವಾಗಿ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರೂ ಈಗ ಪಾದಯಾತ್ರೆ ಯಾಕೆ? ಎಂದು ಪ್ರಶ್ನಿಸುತ್ತಿದ್ದಾರೆ. ಹೀಗಿದ್ದರೂ ಪಾದಯಾತ್ರೆ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಭೋವಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಮಾಡಿದ್ದು ಯಾರು? ಅಕ್ರಮ ನೇಮಕಾತಿ ಆರೋಪ ಎದುರಿಸುತ್ತಿರುವವರನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಈ ಪ್ರಕರಣದ ಆರೋಪಿಗಳು ಯಾರು? ಬಿಜೆಪಿಯನ್ನು ಜನರು ಮರೆತುಬಿಟ್ಟಿದ್ದರು. ಅದಕ್ಕಾಗಿ ಮತ್ತೆ ಜನರ ಮುಂದೆ ಕಾಣಿಸಿಕೊಳ್ಳಲು ಪಾದಯಾತ್ರೆ ಕೈಗೊಂಡಿದ್ದಾರೆ. ಬಿಜೆಪಿಯವರಿಗೆ ಮಾನ-ಮರ್ಯಾದೆ ಇದ್ದರೆ ಪಿಎಸ್ಐ ಹಗರಣ ಯಾರ ಕಾಲದಲ್ಲಿ ನಡೆಯಿತು ಎಂಬುದನ್ನು ಮೊದಲು ಹೇಳಲಿ ಎಂದರು.
ಎಸ್ಟಿಪಿ ಮತ್ತು ಟಿಎಸ್ಪಿ ಅನುದಾನವನ್ನು ಹೆಚ್ಚಿಸಿದವರು ನಾವು. ಆ ಹಣವನ್ನು ಎಸ್ಸಿ-ಎಸ್ಟಿ ಸಮುದಾಯದ ಅಭಿವೃದ್ಧಿಗೆ ನೀಡಿದರೆ ತಪ್ಪೇನು? ಈ ಯೋಜನೆಯನ್ನು ರೂಪಿಸಿ ಜಾರಿಗೆ ತಂದವರು ನಾವು. ಇದರಲ್ಲಿ ನಿಮ್ಮ ಪಾಲು ಏನು?
ತಾಕತ್ತು ಇದ್ದರೆ ಕೇಂದ್ರ ಸರ್ಕಾರಕ್ಕೆ ಹೇಳಿ, ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿಸಲಿ ಎಂದು ಆಗ್ರಹಿಸಿದರು.
ಕೊಪ್ಪಳ ಪ್ರಾಧಿಕಾರ ಹಗರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಆರೋಪಿಗಳನ್ನು ಬಂಧಿಸಿರುವ ಮಾಹಿತಿ ಇದೆ. ಈ ಕುರಿತು ಸಭೆ ಕರೆದು ಚರ್ಚೆ ಮಾಡುತ್ತೇನೆ. ಸೈಟ್ ಹಂಚಿಕೆ ವಿಚಾರದಲ್ಲಿ ಎಲ್ಲೆಲ್ಲಿ ಅಕ್ರಮ ನಡೆದಿದೆ ಎಂಬುದರ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸುತ್ತೇನೆ. ಅಗತ್ಯವಿದ್ದರೆ ತನಿಖೆಗೆ ಅಧಿಕೃತವಾಗಿ ಸೂಚನೆ ನೀಡುತ್ತೇನೆ ಎಂದು ಹೇಳಿದರು.
ಬರ ಘೋಷಣೆಯಲ್ಲಿ ತಾರತಮ್ಯವಿಲ್ಲ:
ಬರ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿವೆ. ಆ ಮಾರ್ಗಸೂಚಿಗಳ ಪ್ರಕಾರ ಅರ್ಹವಾಗಿರುವ ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಇಲ್ಲಿ ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್ ಕ್ಷೇತ್ರ ಎಂಬ ಯಾವುದೇ ತಾರತಮ್ಯ ಮಾಡಿಲ್ಲ. ಎರಡನೇ ಸುತ್ತಿನಲ್ಲಿ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಯರೆಡ್ಡಿ ಅವರು ಮುಸ್ಲಿಂ ಸಮಾಜದ ಕಾರ್ಯಕ್ರಮಕ್ಕೆ ಹೋದಾಗ ಸಹಜವಾಗಿಯೇ ಆ ಸಮಾಜದ ಬಗ್ಗೆ ಮಾತನಾಡುವುದು ಸಾಮಾನ್ಯ. ಅದನ್ನು ದೊಡ್ಡ ವಿವಾದವನ್ನಾಗಿ ಮಾಡುವುದು ಸರಿಯಲ್ಲ. ಅವರು ಮುಸ್ಲಿಂ ಹಾಗೂ ಹಿಂದೂ ಧರ್ಮ ಸೇರಿ ಎಲ್ಲ ಧರ್ಮವನ್ನೂ ಪ್ರೀತಿಸುತ್ತಾರೆ. ನಾನು ಸಹ ಎಲ್ಲ ಧರ್ಮಗಳನ್ನೂ ಪ್ರೀತಿಸುತ್ತೇನೆ ಎಂದು ಶಿವರಾಜ ತಂಗಡಗಿ ಅವರು ಹೇಳಿದರು.
ಬಿಜೆಪಿಯ ಸುನಿಲ್ ಕುಮಾರ್ ಅವರ ಹೇಳಿಕೆ ಗಮನಿಸಿದ್ದೇನೆ. ಬಿಜೆಪಿಯವರಿಗೆ ಧರ್ಮ ಎಂದ ಕೂಡಲೇ ಅವರ ಕಣ್ಣುಗಳು ದೊಡ್ಡದಾಗುತ್ತವೆ. ಮಾಡಬೇಕಾದ ಚರ್ಚೆಯನ್ನು ಅವರು ಮಾಡುವುದಿಲ್ಲ. ಅಧಿವೇಶನ ನಡೆಯಬೇಕಾದ ಸಂದರ್ಭದಲ್ಲಿ ಬೇರೆ ವಿಚಾರಗಳನ್ನು ಪ್ರಸ್ತಾಪಿಸಿದರು. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದರು. ಸದನದಲ್ಲಿ ಚರ್ಚೆ ಮಾಡಲು ವೇದಿಕೆ ಸಿಕ್ಕಿದ್ದರೂ ಅದನ್ನು ಬಳಸಿಕೊಳ್ಳಲಿಲ್ಲ. ಶಾಸಕರು ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲಿಲ್ಲ. ಒಂದು ವಾರದ ಕಾಲ ಸದನದ ಕಲಾಪವನ್ನು ಹಾಳು ಮಾಡಿದರು ಎಂದು ದೂರಿದರು.








