ಗದಗ, “ನಾವು ಮಾರ್ಗಸೂಚಿ ಅನುಸಾರ ಬರ ಪ್ರದೇಶ ಘೋಷಣೆ ಮಾಡಬೇಕು. ಅದರನ್ವಯ ಅಧ್ಯಯನ ಮಾಡಿ ಎರಡನೇ ಪಟ್ಟಿಯನ್ನು ಶೀಘ್ರವೇ ಘೋಷಣೆ ಮಾಡುತ್ತೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಬರ ಪರಿಸ್ಥಿತಿ ಕುರಿತು ಸಿಎಂ ಡಿ ಕೆ ಶಿವಕುಮಾರ್ ಅವರು ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
“ಜಿಲ್ಲಾ ಸಚಿವರು ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ, ವಾಸ್ತವಾಂಶದ ವರದಿ ನೀಡಿದ್ದಾರೆ. ಅದರ ಜೊತೆಗೆ ಅಧಿಕಾರಿಗಳು ಅಧ್ಯಯನ ಮಾಡುತ್ತಿದ್ದಾರೆ. ಎರಡೂ ವರದಿ ಪರಿಶೀಲಿಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕಿದೆ” ಎಂದು ವಿವರಿಸಿದರು.
“ರೈತರ ಬದುಕು ಅಪಾಯದಲ್ಲಿದೆ. ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ. 50 ವರ್ಷಗಳಲ್ಲಿ ಭೀಕರ ಬರ ಪರಿಸ್ಥಿತಿಗೆ ಜಿಲ್ಲೆ ಒಳಗಾಗಿದೆ. ಈ ವರ್ಷ ಶೇ. 40 ರಷ್ಟು ಮಳೆ ಕಡಿಮೆಯಾಗಿದೆ. ನಾನು ಹೆಲಿಕಾಪ್ಟರ್ ನಲ್ಲಿ ಬರುವಾಗ ನೋಡಿದೆ. ಹಲವು ಕಡೆ ಬಿತ್ತನೆಯೇ ಆಗಿಲ್ಲ. ಬಿತ್ತನೆ ಆಗಿರುವ ಕಡೆಗಳಲ್ಲಿ 10-15% ಬೆಳೆ ಕೂಡ ರೈತರ ಕೈ ಸೇರುವುದಿಲ್ಲ” ಎಂದರು.
“ರೈತರ ಜಮೀನಿಗೆ ಹೋಗಿ ಹತ್ತಿ, ಕಡಲೆಕಾಯಿ, ಜೋಳ, ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿದ್ದೇನೆ. ರೈತರಿಗೆ ಯಾವ ಪ್ರಮಾಣದಲ್ಲಿ ತೊಂದರೆ ಆಗುತ್ತಿದೆ ಎಂದು ಮನವರಿಕೆ ಆಗಿದೆ. ರೈತರೊಂದಿಗೆ ಚರ್ಚೆ ಮಾಡಿದ್ದು, ಅವರ ನೋವು ತಿಳಿಸಿದ್ದಾರೆ. ಜನ ವಲಸೆ ಹೋಗುವುದನ್ನು ತಪ್ಪಿಸಲು ವಿಬಿಜಿ ರಾಮ್ ಜಿ ಯೋಜನೆ ಹೇಗೆ ಸಹಾಯ ಆಗಬೇಕು ಎಂದು ತಿಳಿಸಿದ್ದಾರೆ” ಎಂದರು.








