ಮಹಿಳೆಯರ ಪ್ರೀಮಿಯರ್ ಲೀಗ್ ನಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಗೆಲುವು ದಾಖಲಿಸಿದೆ. ಯುಪಿ ವಾರಿಯರ್ಸ್ ಆಡಿದ ಎರಡೂ ಪಂದ್ಯಗಳನ್ನು ಸೋತು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 119 ರನ್ ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಕೇವಲ 14.3 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಮೂರನೇ ಓವರ್ ನಿಂದಲೇ ತಂಡದ ಕುಸಿತ ಆರಂಭವಾಯಿತು. ಆರಂಭಿಕರಾದ ಬೃಂದಾ ದಿನೇಶ್ ಖಾತೆ ತೆರೆಯದೆ ಫೆವಲಿಯನ್ ಸೇರಿದರು. ತಾಹಿಲಾ ಮೆಕ್‌ಗ್ರಾತ್ ಕೇವಲ ಒಂದು ರನ್‌ಗೆ ಸುಸ್ತಾದರು. ಇದರಿಂದ ತಂಡದ ಮೇಲಿನ ಒತ್ತಡ ಹೆಚ್ಚಾಯಿತು. ದೊಡ್ಡ ಜೊತೆಯಾಟದ ಅಗತ್ಯವಿದ್ದಾಗ ಅಲಿಸ್ಸಾ ಹೀಲಿ ಕೂಡ ಕೇವಲ 13 ರನ್ ಗಳಿಸಿದರು. ತಂಡವು 40 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಶ್ವೇತಾ ಸೆಹ್ರಾವತ್ 42 ಎಸೆತಗಳಲ್ಲಿ 45 ರನ್ ಗಳಿಸಿದರು. ರಾಧಾ ಯಾದವ್ ದೆಹಲಿ ಪರ 4 ವಿಕೆಟ್ ಪಡೆದರೆ, ಮಾರಿಜನ್ ಕೆಪ್ 3 ವಿಕೆಟ್, ಅರುಂಧತಿ ರೆಡ್ಡಿ ಮತ್ತು ಅನ್ನಾಬೆಲ್ಲೆ ಸದರ್ಲ್ಯಾಂಡ್ ತಲಾ ಒಂದು ವಿಕೆಟ್ ಪಡೆದರು.
ಸಾಧಾರಣ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ 1 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಮೆಗ್ ಲ್ಯಾನಿಂಗ್ 51 ರನ್ ಸಿಡಿಸಿ ಔಟ್ ಆದರೆ, ಶಫಾಲಿ ವರ್ಮಾ ಅಜೇಯ 64 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.