ಇಂದು ನಮ್ಮ ನಾಡಿನ ಹಿರಿಯ ದಕ್ಷ ಮತ್ತು ಕ್ರಿಯಾಶೀಲ ಪೊಲೀಸ್ ಅಧಿಕಾರಿ ಡಾ.ಬಿ.ಆರ್. ರವಿಕಾಂತೇಗೌಡ ಅವರ ಹುಟ್ಟು ಹಬ್ಬ. ಪ್ರಸ್ತುತ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೌಡರ ಹುಟ್ಟೂರು ಮದ್ದೂರು ತಾಲೂಕಿನ ಬೆಸಗರಹಳ್ಳಿ. ಮಂಡ್ಯ ನೆಲದ ಸೊಗಡಿನ ಪ್ರಸಿದ್ಧ ಕತೆಗಾರರಾದ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸುಪುತ್ರರು. ಬಿ.ಇ., ಎಂ.ಟೆಕ್. ಪದವೀಧರರು. ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆ.ಎ.ಎಸ್. ಪರೀಕ್ಷೆಯನ್ನು ‘ಕನ್ನಡ ಮಾಧ್ಯಮ’ದಲ್ಲಿ ಬರೆದು ಆರನೆಯ ರ್ಯಾಂಕ್ ಪಡೆದು, ಡಿವೈ.ಎಸ್.ಪಿ.ಯಾಗಿ ಆಯ್ಕೆಯಾದವರು ಎಂಬುದು ಗಮನಾರ್ಹ.
ತಮ್ಮ ವೃತ್ತಿ ಬದ್ಧತೆ ಮತ್ತು ಶುದ್ಧತೆಗಾಗಿ ಗಮನಸೆಳೆದು, ೨೦೧೩ ರಲ್ಲಿ ಐ.ಪಿ.ಎಸ್. ಹುದ್ದೆಗೆ ಪದನ್ನೋತಿ ಹೊಂದಿದರು. ಬೆಂಗಳೂರು ನಗರ ಅಪರಾಧ ಕೇಂದ್ರ ವಿಭಾಗ, ಈಶಾನ್ಯ ಮತ್ತು ಕೇಂದ್ರ ವಿಭಾಗ, ಮೈಸೂರು ನಗರ, ಹುಬ್ಬಳ್ಳಿ-ಧಾರವಾಡ ಮಹಾನಗರ ಡಿಸಿಪಿಯಾಗಿ, ರಾಜ್ಯ ಗುಪ್ತವಾರ್ತೆ, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿ.ಯಾಗಿ, ಅಗ್ನಿಶಾಮಕ ವಿಭಾಗದ ಡಿ.ಐ.ಜಿ.ಪಿ.ಯಾಗಿ, ಎಸ್.ಐ.ಟಿ. ಮುಖ್ಯಸ್ಥರಾಗಿ ಅಪಾರ ವೃತ್ತಿ ಅನುಭವ ಹೊಂದಿರುವ ‘ಡೈನಮಿಕ್ ಪೊಲೀಸ್ ಅಧಿಕಾರಿ’. ‘ಜನಸ್ನೇಹಿ ಆಡಳಿತ’ ರವಿಕಾಂತೇಗೌಡ ಅವರ ಕಾರ್ಯ ವೈಖರಿಯ ಪರಿ. ಕರ್ನಾಟಕದ ಇತಿಹಾಸದಲ್ಲಿ ಆಂಗ್ಲಮಯವಾಗಿದ್ದ ಪೊಲೀಸ್ ಪೆರೇಡ್ ಆದೇಶಗಳನ್ನು ‘ಕನ್ನಡೀಕರಣ’ಗೊಳಿಸಿದ ಹೆಗ್ಗಳಿಕೆ ಹೊಂದಿರುವ ಗೌಡರ ‘ಕನ್ನಡ ಪ್ರೀತಿ’ ಇಂದಿನ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೊಂದು ಮಾದರಿ.
ಅಪ್ಪಟ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಿಯರಾಗಿರುವ ಗೌಡರ ಪ್ರತಿ ನಡೆ ಮತ್ತು ನುಡಿಯಲ್ಲೂ ಜೀವಪರ ಕಾಳಜಿ ಎದ್ದು ಕಾಣುತ್ತದೆ. ಯಾವುದೇ ವಿಷಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಪ್ರಖಂಡ ವಾಗ್ಮಿ. ‘ರವಿ ಬೆಸಗರಹಳ್ಳಿ’ ಎಂಬ ಕಾವ್ಯನಾಮದ ಮೂಲಕ ಹಲವು ಕತೆ, ಕವಿತೆ, ಲೇಖನಗಳ ಬರೆದಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ‘ಕುವೆಂಪು – ಒಂದು ಪ್ರಚಲಿತ ವಿದ್ಯಮಾನ’ ಎಂಬ ಮಹಾಪ್ರಬಂಧವನ್ನು ಸಲ್ಲಿಸಿ ‘ಡಾಕ್ಟರೇಟ್’ ಪದವಿ ಪಡೆದಿದ್ದಾರೆ. ಇವರು ‘ಕಾಡುಗಿಣಿ’ ಎಂಬ ಕೃತಿಯ ಸಂಪಾದಕರು ಸಹ ಹೌದು. ದಕ್ಷ, ಕ್ರಿಯಾಶೀಲ, ಕರ್ತವ್ಯ ನಿಷ್ಠ ಪೊಲೀಸ್ ಅಧಿಕಾರಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ರವಿಕಾಂತೇಗೌಡರಿಗೆ ‘ಡಾ. ಸುಭಾಷ್ ಭರಣಿ ಕ್ರಿಯಾಶೀಲ ಪೊಲೀಸ್ ಅಧಿಕಾರಿ ಪ್ರಶಸ್ತಿ’, ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ರಾಷ್ಟ್ರಪತಿಗಳ ಸೇವಾ ಪದಕ ದೊರೆತಿವೆ.
ಡಾ. ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ಮೂಲಕ ಹಲವು ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ನಡೆಸಲು ಕಾರಣಕರ್ತರು. ವೈಚಾರಿಕ ಮನೋಭಾವದ ‘ಸೂಪರ್ ಕಾಫ್’ ಡಾ.ಬಿ.ಆರ್. ರವಿಕಾಂತೇಗೌಡರ ಜನುಮ ದಿನಕ್ಕೆ ನಿಮ್ಮ ಶುಭ ಹಾರೈಕೆ ಇರಲಿ ಸ್ನೇಹಿತರೇ. ನಿಮ್ಮ ಬದುಕು, ವೃತ್ತಿ ಮತ್ತು ಬರಹ ಅನುಕಗಾಲವೂ ಹಸಿರಾಗಿರಲಿ ರವಿಯಣ್ಣ ಎನ್ನುವ ಪ್ರೀತಿಯ ಹಾರೈಕೆಯೊಂದಿಗೆ..
-ಸತೀಶ್ ಜವರೇಗೌಡ (ಸಜಗೌ)
ಸಾಹಿತಿಗಳು ಹಾಗೂ ಸಂಘಟಕರು
ಮಂಡ್ಯ