ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಪ್ರಕರಣದ ಆರೋಪಿಗೆ ಗನ್ ಮ್ಯಾನ್ ನೀಡಲಾಗಿದೆ.
ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ದಳ ರಚಿಸಿತ್ತು. ತನಿಖೆ ಸಂದರ್ಭದಲ್ಲಿ ಸ್ಪೋಟಕ ಮಾಹಿತಿ ನೀಡಿರುವ ಶ್ರೀಕಿಗೆ ಕೊಲೆ ಬೆದರಿಕೆ ಇದೆ. ಅಲ್ಲದೇ ಶ್ರೀಕಿ ಪೊಲೀಸರ ಕೈಯಲ್ಲಿ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಹೀಗಾಗಿ ಎಸ್‌ಐಟಿ ಶ್ರೀಕಿಗೆ ಗನ್ ಮ್ಯಾನ್ ನೀಡಿದೆ.
ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ವಿವಿಧ ಸೈಬರ್ ಕ್ರೈಂಗಳಲ್ಲಿ ಭಾಗಿಯಾದ ಆರೋಪದಡಿ ಶ್ರೀಕಿ ಹಾಗೂ ನಾಲ್ವರು ಇತರರ ವಿರುದ್ಧ 2021ರ ಫೆಬ್ರವರಿ 22ರಂದು ಮೊದಲ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಎಸ್ ಐಟಿ ತನಿಖೆಗೆ ಈ ಪ್ರಕರಣವನ್ನು ವಹಿಸಿದೆ.
ಶ್ರೀಕೃಷ್ಣ (ಶ್ರೀಕಿ) ಬೆಂಗಳೂರು ಮೂಲದವನಾಗಿದ್ದು, 2014 ರಿಂದ 2017ರವರೆಗೆ ಈತ ನೆದರ್‌ಲ್ಯಾಂಡ್ ಆಮ್‌ಸ್ಟರ್‌ಡ್ಯಾಮ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‍ಸಿ ಪದವಿ ಪಡೆದ ನಂತರ ವೆಬ್‍ಸೈಟ್ ಹ್ಯಾಕ್ ಮಾಡಲು ಆರಂಭಿಸಿದ್ದ. ಆರಂಭದಲ್ಲಿ ಸಣ್ಣ ಪಟ್ಟ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಅನುಭವ ಪಡೆದ ಬಳಿಕ ದೊಡ್ಡ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ.