130.85 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹2,321 ಕೋಟಿ ವೆಚ್ಚಕ್ಕೆ ಸಂಪುಟ ಅಸ್ತು; ಪ್ರತಿ ಕಿ.ಮೀ.ಗೆ ₹17.74 ಕೋಟಿ ಖರ್ಚು ಮಾಡಲು ನಿರ್ಧಾರ
ಬೆಂಗಳೂರು: ಬೆಂಗಳೂರಿನ ರಸ್ತೆಗಳಿಗೆ ವೈಟ್ಟಾಪಿಂಗ್ ಮಾಡುವ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ದುಂದುವೆಚ್ಚ ಮಾಡಲು ಹೊರಟಿದೆ ಎಂದು ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ.
ಮಾರ್ಚ್ ತಿಂಗಳ ಬಜೆಟ್ನಲ್ಲಿ ಪ್ರತಿ ಕಿ.ಮೀ.ಗೆ ಸರಾಸರಿ ₹6.66 ಕೋಟಿ ವೆಚ್ಚದಲ್ಲಿ ವೈಟ್ಟಾಪಿಂಗ್ ಕಾಮಗಾರಿ ನಡೆಸುವುದಾಗಿ ಘೋಷಿಸಿದ್ದ ಸರ್ಕಾರ, ಇದೀಗ ಕೇವಲ 130.85 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹2,321.17 ಕೋಟಿ ವೆಚ್ಚ ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಅಂದರೆ ಪ್ರತಿ ಕಿ.ಮೀ.ಗೆ ಸರಾಸರಿ ₹17.74 ಕೋಟಿ ವೆಚ್ಚವಾಗಲಿದ್ದು, ಆರಂಭದಲ್ಲಿ ಘೋಷಿಸಿದ್ದ ಅಂದಾಜಿಗಿಂತ ಸುಮಾರು ಮೂರು ಪಟ್ಟು ಹೆಚ್ಚಿನ ಮೊತ್ತ ನಿಗದಿಪಡಿಸಲಾಗಿದೆ.
ಈ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಕಮಿಷನ್ ಮತ್ತು ಲೂಟಿಗೆ ಅವಕಾಶ ಮಾಡಿಕೊಡುವ ಹುನ್ನಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.
ಕೇವಲ 88 ರಸ್ತೆಗಳಲ್ಲಿ 130.85 ಕಿ.ಮೀ. ವೈಟ್ಟಾಪಿಂಗ್ ಕಾಮಗಾರಿಗಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಸ್ತೆ ಕಾಮಗಾರಿಗಳ ಗುಣಮಟ್ಟ ಮತ್ತು ವೆಚ್ಚದ ಸಮರ್ಥನೆಗಿಂತ ಗುತ್ತಿಗೆದಾರರ ಹಿತಾಸಕ್ತಿಗೆ ಸರ್ಕಾರ ಆದ್ಯತೆ ನೀಡುತ್ತಿದೆಯೇ ಎಂಬ ಪ್ರಶ್ನೆಯನ್ನೂ ಬಿಜೆಪಿ ಮುಂದಿಟ್ಟಿದೆ.
ಒಂದೆಡೆ ಬಡವರು, ಮಹಿಳೆಯರು ಹಾಗೂ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆರ್ಥಿಕ ಸಂಕಷ್ಟದ ನೆಪ ಹೇಳುವ ಸರ್ಕಾರ, ಮತ್ತೊಂದೆಡೆ ಬೆಂಗಳೂರಿನ ರಸ್ತೆ ಕಾಮಗಾರಿಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಿರುವುದು ದ್ವಂದ್ವ ನೀತಿಗೆ ಸಾಕ್ಷಿ ಎಂದು ಟೀಕಿಸಿದೆ.
ಬೆಂಗಳೂರಿನ ಜನರು ಕಷ್ಟಪಟ್ಟು ದುಡಿದು ಪಾವತಿಸುವ ತೆರಿಗೆ ಹಣದ ಬಳಕೆಯಲ್ಲಿ ಸರ್ಕಾರ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ವೈಟ್ಟಾಪಿಂಗ್ ಯೋಜನೆಯ ವೆಚ್ಚ ಮೂರು ಪಟ್ಟು ಹೆಚ್ಚಾಗಿರುವುದಕ್ಕೆ ಸ್ಪಷ್ಟ ಕಾರಣ ನೀಡಬೇಕು. ಕಾಮಗಾರಿಗಳ ಅಂದಾಜು ವೆಚ್ಚ, ಟೆಂಡರ್ ಪ್ರಕ್ರಿಯೆ ಹಾಗೂ ಗುತ್ತಿಗೆದಾರರ ಆಯ್ಕೆ ಸೇರಿದಂತೆ ಎಲ್ಲ ವಿವರಗಳನ್ನು ಸಾರ್ವಜನಿಕರ ಮುಂದಿಡಬೇಕು. ದುಬಾರಿ ವೆಚ್ಚದ ಈ ಯೋಜನೆಯನ್ನು ತಕ್ಷಣ ಮರುಪರಿಶೀಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.








