ಎಲ್ಲರೂ ಧ್ವನಿವರ್ಧಕ ಬಳಸುತ್ತಾ ಹೋದರೆ ಸಮಸ್ಯೆ ಹೆಚ್ಚಾಗುತ್ತದೆ : ಕೆ. ಎಸ್. ಈಶ್ವರಪ್ಪ
ಕಾರವಾರ: ಎಲ್ಲರೂ ಧ್ವನಿವರ್ಧಕ ಬಳಸುತ್ತಾ ಹೋದರೆ ಸಮಸ್ಯೆ ಹೆಚ್ಚಾಗುತ್ತದೆ. ಇದು ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಅಂಕೋಲ ತಾಲ್ಲೂಕಿನ ಮಾದನಗೇರಿ ಗ್ರಾಮದಲ್ಲಿ ಮಾತನಾಡಿದ ಅವರು ಮಸೀದಿಗಳಲ್ಲಿ ಆಜಾನ್ ವೇಳೆ ಶಬ್ದ ಮಾಲಿನ್ಯವಾಗುತ್ತದೆ ಎಂದು ನಾವು ಸ್ಪರ್ಧಿಸಲು ಹೋಗಬಾರದು. ಮುಸ್ಲಿಮರನ್ನು ಒಪ್ಪಿಸಿ ಶಬ್ದ ಕಡಿಮೆ ಮಾಡಿಸಬೇಕಾಗಿದೆ ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಜೋರಾಗಿ ಮೈಕ್ ಹಾಕಿದರೆ ವಿದ್ಯಾರ್ಥಿಗಳು ಓದಿಕೊಳ್ಳುವುದಕ್ಕೂ ಸಮಸ್ಯೆಯಾಗುತ್ತದೆ. ಹೀಗಾಗಿ ಮುಸ್ಲಿಮರು ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.
ಅಲ್ಲದೇ ಮುಂಚೆಯಿಂದಲೂ ಬಂದಂತಹ ಪದ್ಧತಿಯ ಮೂಲಕ ದೇವರ ಪ್ರಾರ್ಥನೆ ಮಾಡುತ್ತೇವೆ ಎನ್ನುವುದು ಮುಸ್ಲಿಮರ ವಾದ. ಅವರು ಮಸೀದಿಗಳಲ್ಲಿ ಜೋರಾಗಿ ಕೂಗುತ್ತಾರೆ, ಅದಕ್ಕೆ ಹನುಮಾನ್ ಚಾಲೀಸ ಮೈಕಿನಲ್ಲಿ ಹಾಕ್ಬೇಕು ಅಂತಾ ನಾವು ಸ್ಪರ್ಧೆ ಮಾಡಬಾರದು. ಮಸೀದಿಯಲ್ಲಿ ಕೂಗುವುದರಿಂದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ತೊಂದರೆಯಾಗುತ್ತಿದೆ ಎನ್ನುವ ಮಾತು ಸಹ ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ಮುಸ್ಲಿಂ ಸಮುದಾಯದ ಮುಖಂಡರೇ ಈ ಬಗ್ಗೆ ಚಿಂತನೆ ಮಾಡಿ ನಿರ್ಧರಿಸಬೇಕು ಎಂದು ಸಲಹೆ ಮಾಡಿದರು.
ಹಲಾಲ್ ಹಾಗೂ ಜಟ್ಕಾ ಮಾಂಸ ವಿಚಾರ: ಕುರಿಗಾಹಿಗಳಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಹಲಾಲ್ ಅಥವಾ ಜಟ್ಕಾ ವಿಧಾನದಲ್ಲಿ ಪ್ರಾಣಿಗಳ ವಧೆ ಮಾಡಿದರೂ ಮಾಂಸ ತಿನ್ನುವವರು ತಿಂದೆ ತಿನ್ನುತ್ತಾರೆ. ಕುರಿಗಾಹಿಗಳಿಗೆ ಕುರಿಗಳ ಮಾರಾಟಕ್ಕೆ ಏನೂ ತೊಂದರೆ ಆಗುವುದಿಲ್ಲ. ಹಲಾಲ್ ಮುಸಲ್ಮಾನರ ಪದ್ಧತಿ, ಜಟ್ಕಾ ಹಿಂದೂಗಳ ಪದ್ಧತಿ. ಯಾರಿಗೆ ಹೇಗೆ ಬೇಕು ಆ ರೀತಿಯಲ್ಲಿ ಮಾಂಸ ತಿನ್ನಲಿ. ಇದರಲ್ಲಿ ಸಂಘರ್ಷ ಮಾಡಬೇಕೆಂದೇನಿಲ್ಲ. ಜಟ್ಕಾ ಅಥವಾ ಹಲಾಲ್ ವಿಧಾನದ ಮೂಲಕವೇ ವಧಿಸಿ ಮಾಂಸ ತಿನ್ನಬೇಕು ಎಂದು ಆಗ್ರಹಿಸುವುದು ತಪ್ಪು ಎಂದರು.








