ಬಾಗಲಕೋಟೆ: ಖಾಸಗಿ ವಾಹಿನಿಯ ವರದಿಗಾರ ಎಂದು ಹೇಳಿಕೊಂಡು ತಿರುಗುತ್ತಿದ್ದ ವ್ಯಕ್ತಿಯೊಬ್ಬ ಬಿಜೆಪಿ (BJP) ಕಾರ್ಯಕರ್ತೆ ಹಾಗೂ ಖಾಸಗಿ ಶಾಲೆಯ ಶಿಕ್ಷಕಿ ಫೋಟೋ ಬಳಸಿಕೊಂಡು ಅಶ್ಲೀಲ ವಿಡಿಯೋ ತಯಾರಿಸಿ ಬ್ಲ್ಯಾಕ್ಮೇಲ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಘಟನೆ ಜಮಖಂಡಿಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯ ಫೋಟೋ ಒಂದಕ್ಕೆ ಕಣ್ಣಿಗೆ ಕಪ್ಪು ಪಟ್ಟಿ ಹಾಕಿ ಎಡಿಟ್ ಮಾಡಿ ಅಶ್ಲೀಲ ವಿಡಿಯೋ ರಡಿ ಮಾಡಿದ್ದಾನೆ. ನಂತರ ಬೇರೆ ಅಶ್ಲೀಲ ವಿಡಿಯೋ ಬ್ಲರ್ ಮಾಡಿ ಬಿಜೆಪಿ ಕಾರ್ಯಕರ್ತೆಯ ವಿಡಿಯೋ ಎಂಬಂತೆ ಸಿದ್ಧ ಮಾಡಿದ್ದಾನೆ. ಆನಂತರ ಅದಕ್ಕೆ ಬಿಜೆಪಿ ಕಾರ್ಯಕರ್ತೆಯ ರಾಸಲೀಲೆ ಎಂದು ಬರೆದಿದ್ದಾನೆ.
ಈ ವಿಡಿಯೋ ರಡಿ ಮಾಡಿದ ನಂತರ ಮಹಿಳೆಗೆ ಬಂದೆನವಾಜ್ ಸರಕಾವಸ್ ಎಂಬಾತ ಕರೆ ಮಾಡಿ, ನಾನು ಖಾಸಗಿ ಸುದ್ದಿ ವಾಹಿನಿಯ ವರದಿಗಾರ. ನನ್ನ ಹತ್ತಿರ ನಿಮ್ಮ ರಾಸಲೀಲೆ ವೀಡಿಯೋ ಇದೆ. ನನ್ನನ್ನು ಬೇಟಿ ಮಾಡಿ ಇದನ್ನು ಬಗೆಹರಿಸಿಕೊಳ್ಳಿ. ಇದಕ್ಕೆ ಹಣ ಖರ್ಚಾಗುತ್ತದೆ ಎಂದು ಹೇಳಿ, ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ನಂತರ ಈ ಮಹಿಳೆ ಆತನ ಕಾಟಕ್ಕೆ ಬೇಸತ್ತು ದೂರು ದಾಖಲಿಸಿದ್ದಾರೆ. ಈ ಕುರಿತು ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.