Board exams : 5 ಮತ್ತು 8ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್ ಆದೇಶ…
5 ಮತ್ತು 8ನೇ ತರಗತಿಗಳ ಬೋರ್ಡ್ ಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡಿದ್ದ ತೀರ್ಮಾನವನ್ನ ಹೈಕೋರ್ಟ್ ರದ್ದುಗೊಳಿಸಿದೆ.
ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ಬೋರ್ಡ್ ಪರೀಕ್ಷೆ ನಡೆಸಲು ಮುಂದಾಗಿದ್ದ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಈ ಸಂಬಂಧ ಹೊರಡಿಸಿದ್ದ ಸುತ್ತೋಲೆಯನ್ನ ಅನೂರ್ಜಿತಗೊಳಿಸಲಾಗಿದೆ. ಸೋಮವಾರದಿಂದ ಪರೀಕ್ಷೆಗಳು ಆರಂಭವಾಗಬೇಕಿದ್ದರಿಂದ ಸದ್ಯ ಮಕ್ಕಳು ಬೋರ್ಡ್ ಪರೀಕ್ಷೆ ಭಯದಿಂದ ಪಾರಾಗಲಿದ್ದಾರೆ.
ಸರಕಾರದ ಸುತ್ತೋಲೆ ರದ್ದು ಕೋರಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಸೇರಿದಂತೆ ಮತ್ತಿತರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಪ್ರದೀಪ್‌ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ಈ ಆದೇಶ ಹೊರಡಿಸಿದೆ. ಇದೇ ವೇಳೆ ಸರಕಾರ ಸುತ್ತೋಲೆ ಹೊರಡಿಸಿದ್ದರ ಹಿಂದಿನ ಉದ್ದೇಶವನ್ನು ಕೋರ್ಟ್ ಶ್ಲಾಘಿಸಿದೆ. ಆದರೆ, ಅದು ಅನುಸರಿಸಿದ ಪ್ರಕ್ರಿಯೆ ಮತ್ತು ವಿಧಾನವೇ ಸೂಕ್ತವಾಗಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಂಡಳಿ (ಬೋರ್ಡ್) ಪರೀಕ್ಷೆ ನಡೆಸಲು ತೀರ್ಮಾನ ಕೈಗೊಂಡಿತ್ತು.
Board exams : 5 ಮತ್ತು 8ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್ ಆದೇಶ…
Board exams: High Court order to cancel the board exam of 5th and 8th classes…