ಬಾಲಿವುಡ್ ನಟಿ ರೇಖಾ ಅವರ ಬಂಗಲೆ ಸೀಲ್ ಡೌನ್
ಮುಂಬೈ, ಜುಲೈ 12: ಮುಂಬೈನ ಬಾಂದ್ರಾದಲ್ಲಿನ ಬಾಲಿವುಡ್ ನಟಿ ರೇಖಾ ಅವರ ಬಂಗಲೆ ‘ಸೀ ಸ್ಪ್ರಿಂಗ್ಸ್’ ನ ತನ್ನ ಭದ್ರತಾ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವು ರೇಖಾ ಅವರ ಬಂಗಲೆಯನ್ನು ಸೀಲ್ ಡೌನ್ ಮಾಡಿದ್ದು, ರೇಖಾ ಅವರ ಬಂಗಲೆಯ ಮುಂದೆ ನೋಟಿಸ್ ಅನ್ನು ಅಂಟಿಸಿದೆ.
ವರದಿಗಳ ಪ್ರಕಾರ, ಬಾಂದ್ರಾದ ಬ್ಯಾಂಡ್ಸ್ಟ್ಯಾಂಡ್ ಪ್ರದೇಶದಲ್ಲಿನ ರೇಖಾ ಅವರ ಬಂಗಲೆಗೆ ಇಬ್ಬರು ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಸೆಕ್ಯುರಿಟಿ ಗಾರ್ಡ್ಗಳಲ್ಲಿ ಒಬ್ಬರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಮುಂಬೈನ ಬಿಕೆಸಿಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಘಟನೆಯ ನಂತರ, ಮುಂಬೈನ ನಾಗರಿಕ ಸಂಸ್ಥೆ ಬಿಎಂಸಿ ಇಡೀ ಪ್ರದೇಶವನ್ನು ಸ್ಯಾನಿಟೈಸರ್ ಮಾಡಿ ಸ್ವಚ್ಛಗೊಳಿಸಿದೆ.
ರೇಖಾ ಅವರ ಬಂಗಲೆಯನ್ನು ಕಂಟೇನ್ಮೆಂಟ್ ವಲಯವನ್ನಾಗಿ ಮಾಡಿರುವುದನ್ನು ಸೂಚಿಸುವ ನೋಟಿಸ್ ಅನ್ನು ಬಿಎಂಸಿ ಅಂಟಿಸಿದೆ. ಆದರೆ ಈ ಘಟನೆಯ ಬಗ್ಗೆ ರೇಖಾ ಅಥವಾ ಅವರ ವಕ್ತಾರರಿಂದ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ.
ಈ ಮೊದಲು, ಅಮೀರ್ ಖಾನ್, ಬೋನಿ ಕಪೂರ್ ಮತ್ತು ಕರಣ್ ಜೋಹರ್ ಅವರ ಸಿಬ್ಬಂದಿಗಳಿಗೂ ಸಹ ಕೊರೊನಾ ಸೋಂಕು ದೃಢಪಟ್ಟಿತ್ತು ಮತ್ತು ಅವರೆಲ್ಲರೂ ಕ್ವಾರಂಟೈನ್ ಗೆ ಒಳಗಾಗಿದ್ದರು.








