ಬೆಂಗಳೂರು: ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಶಂಕಿತ ಆರೋಪಿಯ ಫೋಟೋ ಹಾಗೂ ವೀಡಿಯೋ ಸಿಕ್ಕ ಬೆನ್ನಲ್ಲಿಯೇ ಈತನನ್ನೇ ಹೋಲುವ ನಾಲ್ವರು ವ್ಯಕ್ತಿಗಳನ್ನು ತಡರಾತ್ರಿಯೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸಿಸಿಟಿವಿ, ಟವರ್ ಲೋಕೇಷನ್ ಹಾಗೂ ಪೊಲೀಸರ ಶಂಕೆ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
10 ತಂಡಗಳಿಂದ ತೀವ್ರ ತನಿಖೆ ನಡೆಯುತ್ತಿದ್ದು, ಬ್ಲಾಸ್ಟ್ ಪ್ರಕರಣ ಸಂಬಂಧ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಆರೋಪಿಗಾಗಿ ತೀವ್ರ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಹಿಂದೆ ಬ್ಲಾಸ್ಟ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಕೂಡ ವಿಚಾರಣೆಗೆ ಒಳಪಡಿಸಲಾತ್ತಿದ್ದು, ರಾಮೇಶ್ವರ ಕೆಫೆಯ ಪ್ರಮುಖ ಬ್ರಾಂಚ್ ತಮಿಳುನಾಡಿನಲ್ಲಿದ್ದು, ಅಲ್ಲಿ ಕೂಡ ವಿಚಾರಣೆ ನಡೆಸಲಾಗುತ್ತಿದೆ. ಶಂಕಿತ ಉಗ್ರ ಮುಖಕ್ಕೆ ಮಾಸ್ಕ್ ಕಣ್ಣಿಗೆ ಕೂಲಿಂಗ್ ಗ್ಲಾಸ್, ತಲೆ ಮೇಲೆ ವೈಟ್ ಹ್ಯಾಟ್ ಹಾಕಿಕೊಳ್ಳುವ ಮೂಲಕ ಪ್ಲಾನ್ ಮಾಡಿಯೇ ಕೆಫೆಗೆ ಎಂಟ್ರಿ ಕೊಟ್ಟಿದ್ದಾನೆ. ಬಲಭುಜದ ಹಿಂಬದಿಗೆ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು ಹೋಟೆಲ್ ಗೆ ಬಂದಿರುವ ಆರೋಪಿ ಹೋಟೆಲ್ ನಲ್ಲಿ ತಿಂಡಿ ತಿಂದು ಸಾಗುವ ಎಕ್ಸ್ ಕ್ಲೂಸಿವ್ ಫೋಟೋ ಹಾಗೂ ವೀಡಿಯೋಗಳು ಸಿಕ್ಕಿವೆ.
ಆತ ರವೆ ಇಡ್ಲಿ ತಿಂದು ಹ್ಯಾಡ್ ವಾಶಿಂಗ್ಗೆ ಹೋಗಿದ್ದಾನೆ. ಹ್ಯಾಂಡ್ ವಾಶ್ ಮಾಡಿ ಬ್ಯಾಗ್ ಅಲ್ಲಿಯೇ ಇಟ್ಟು ಬೈಕ್ ನಲ್ಲಿ ಹೋಗಿದ್ದಾನೆ. ಅದು ಒಂದು ಗಂಟೆಯ ನಂತರ ಬ್ಲಾಸ್ಟ್ ಆಗಿದೆ. ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಘಟನೆ ನಡೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.