ಬೆಂಗಳೂರು : ಕೊರೊನಾ ಲಾಕ್ ಡೌನ್ ಸಂಕಷ್ಟದಿಂದ ರಾಜ್ಯದ ರೈತರು ನಲುಗಿ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ನಶಿಸಿಹೋಗುತ್ತಿರುವ ಹಣ್ಣು, ತರಕಾರಿಯನ್ನು ಖರೀದಿ ಮಾಡಿ ಜನರಿಗೆ ಹಂಚಿಕೆ ಮಾಡುವಂತೆ ಕಾಂಗ್ರೆಸ್ ತನ್ನ ಶಾಸಕರಿಗೆ ಸೂಚನೆ ನೀಡಿದೆ. ಇದಲ್ಲದೆ ಕೆಪಿಸಿಸಿ ಈಗಾಗಲೇ ಕೊರೊನಾ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಟಾಸ್ಕ್ ಫೋರ್ಸ್, ವಿಷನ್ ಟೀಂ ಸೇರಿ ನಾನಾ ರೀತಿಯ ಸಮಿತಿಗಳನ್ನು ರಚನೆ ಮಾಡಿದೆ. ಬಹುತೇಕ ಹಿರಿಯ ನಾಯಕರನ್ನು ಒಳಗೊಂಡ ಸಮಿತಿಗಳು ಕ್ರಿಯಾಶೀಲವಾಗಿವೆ. ಮಾಜಿ ಸಚಿವ ಕೃಷ್ಣಬೈರೇಗೌಡ ನೇತೃತ್ವದ ವಾರ್ ರೂಂ ಕೂಡ ಕೆಲಸ ಮಾಡುತ್ತಿದೆ. ವಾರ್ ರೂಂಗೆ ಬರುತ್ತಿರುವ ದೂರುಗಳ ಪೈಕಿ ಹೆಚ್ಚಾಗಿ ರೈತ ಉತ್ಪನ್ನಗಳ ಕುರಿತಾಗಿವೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷದ ಶಾಸಕರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದು, ಕೃಷಿ ಉತ್ಪನ್ನಗಳನ್ನು ಖರೀದಿಸಿ ಜನರಿಗೆ ಹಂಚುವಂತೆ ಸೂಚಿಸಿದ್ದಾರೆ.
ಅದರಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮೀ ಹೆಬ್ಬಾಳ್ಕರ್, ಕುಣಿಗಲ್ ನ ಡಾ.ರಂಗನಾಥ್, ದೊಡ್ಡಬಳ್ಳಾಪುರ ಕ್ಷೇತ್ರದ ವೆಂಕಟರಮಣಯ್ಯ ಸೇರಿ ಮತ್ತಿತರರು ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಿ ಉಚಿತವಾಗಿ ಜನರಿಗೆ ಹಂಚುತ್ತಿದ್ದಾರೆ.
ಇತ್ತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಡಿ.ಕೆ.ಸುರೇಶ್ ಅವರು ಡಿ.ಕೆ.ಚಾರಿಟಬಲ್ ಟ್ರಸ್ಟ್ ನಿಂದ ಹಣ್ಣು ತರಕಾರಿಗಳನ್ನು ಖರೀದಿಸಿ ಹಂಚುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ಉಳಿದ ಕ್ಷೇತ್ರಗಳ ಶಾಸಕರು ರೈತರ ನೆರವಿಗೆ ಬರುವಂತೆ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡುತ್ತಿದ್ದಾರೆ.








