ಮಹತ್ವ ಜವಾಬ್ದಾರಿ ಹೊತ್ತು ಸಿಎಂ ಕುರ್ಚಿ ಉಳಿಸಿಕೊಂಡ್ರಾ ರಾಜಾಹುಲಿ..?
ನವದೆಹಲಿ : ಮಹತ್ವ ಜವಾಬ್ದಾರಿ ಹೊತ್ತು ಕುರ್ಚಿ ಉಳಿಸಿಕೊಂಡ್ರಾ ರಾಜಾಹುಲಿ..? ದೆಹಲಿಯಿಂದಲೇ ತಮ್ಮ ವಿರೋಧಿಗಳಿಗೆ ರಾಜ್ಯ ಬಿಜೆಪಿಯ ಮಾಸ್ ಲೀಡರ್ ಬಿ.ಎಸ್.ಯಡಿಯೂರಪ್ಪ ರವಾನಿಸಿದ ಸಂದೇಶವೇನು..? ಕೆಂಡದಂತಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಥಂಡಾ ಮಾಡಿದ್ದೇಗೆ ಯಡಿಯೂರಪ್ಪ..? ಸದ್ಯ ರಾಜಕೀಯ ಪಂಡಿತರಲ್ಲಿ ಕಾಡುತ್ತಿರುವ ಪ್ರಶ್ನೆಗಳಿವು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದ ವಿಚಾರ ಗೊತ್ತಾಗುತ್ತಿದ್ದಂತೆ ಎಲ್ಲರಲ್ಲೂ ಸಾಕಷ್ಟು ಕುತೂಹಲ, ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇದಕ್ಕೆ ಪ್ರಮುಖ ಕಾರಣ ಕೊರೊನಾ ಸಂಕಷ್ಟ ಮಧ್ಯೆಯೂ ಸದ್ದು ಮಾಡಿದ್ದ ನಾಯಕತ್ವ ಬದಲಾವಣೆ ವಿಚಾರ.
ಹೌದು..! ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನೇನು ಕೆಲವೇ ದಿನಗಳಲ್ಲಿ ಸಿಎಂ ಕುರ್ಚಿ ಖಾಲಿ ಮಾಡಲಿದ್ದಾರೆ. ಅವರ ಸ್ಥಾನಕ್ಕೆ ಉತ್ತರ ಕರ್ನಾಟಕದ ಯಂಗ್ ಅಂಡ್ ಎನರ್ಜಿಟಿಕ್ ನಾಯಕನನ್ನು ಕೂರಿಸ್ತಾರೆ ಅನ್ನೋ ಸುದ್ದಿ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಅದಕ್ಕೆ ಪುಷ್ಠಿ ನೀಡುವಂತಹ ಹೇಳಿಕೆಗಳು ಘಟನಾವಳಿಗಳು ಕೂಡ ರಾಜ್ಯ ಬಿಜೆಪಿಯಲ್ಲಿ ನಡೆದಿದ್ದವು.
ಅದರಲ್ಲೂ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವೇ ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ನೀಡ್ತೀನಿ ಅಂದಿದ್ದು, ನಾಯಕತ್ವ ಬದಲಾವಣೆಯ ಆಟದ ರೋಚಕತೆಯನ್ನ ಹೆಚ್ಚಿಸಿತ್ತು. ಇನ್ನೇನು ಈ ಆಟ ಅಂತಿಮಘಟ್ಟಕ್ಕೆ ತಲುಪುತ್ತೆ ಅನ್ನೋವಷ್ಠರಲ್ಲಿ ಅರುಣ ಸಂದೇಶ ಎಲ್ಲವನ್ನು ತಣ್ಣಗಾಗಿಸಿತ್ತು. ಆದರೂ ಸಿಎಂ ಬದಲಾವಣೆ ವಿಚಾರ ಮಾತ್ರ ಬೂದಿಮುಚ್ಚಿದ ಕೆಂಡದಂತೆ ಬಿಜೆಪಿಯ ಪಡಸಾಲೆಯಲ್ಲಿ ಹೊಗೆಯಾಡುತ್ತಲೇ ಇತ್ತು.
ಹೀಗಿರುವಾಗಲೇ ಮುಖ್ಯಮಂತ್ರಿ ದೆಹಲಿ ಪ್ರಯಾಣ ಸಾಮಾನ್ಯವಾಗಿಯೇ ಕುತೂಹಲಕ್ಕೆ ಕಾರಣವಾಗಿತ್ತು. ಆದ್ರೆ ರಾಜಕೀಯ ಪಟ್ಟುಗಳನ್ನು ಕಲಿತಿರುವ ಬಿ.ಎಸ್.ಯಡಿಯೂರಪ್ಪ ತ್ರಿವಿಕ್ರಮನಂತೆ ನಾಯಕತ್ವ ಬದಲಾವಣೆ ಬಲೆಯನ್ನು ಭೇದಿಸಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿಗಳ ಜೊತೆ ತೆಗೆಸಿಕೊಂಡಿರುವ ನಗುಮುಖದ ಫೋಟೋವೇ ಸಾಕ್ಷಿ.
ಮಹತ್ವ ಜವಾಬ್ದಾರಿ ಹೊತ್ತು ಕುರ್ಚಿ ಉಳಿಸಿಕೊಂಡ್ರಾ ರಾಜಾಹುಲಿ..?
ಹೌದು..! ಇಳಿವಯಸ್ಸಿನ ಯಡಿಯೂರಪ್ಪ ಪಕ್ಷ ಸಂಘಟನೆಯಲ್ಲಿ ನಿಸ್ಸೀಮರು ಅಂತ ಪ್ರತ್ಯೇಕವಾಗಿ ಹೇಳಬೇಕಾದ ವಿಷಯವೇನಲ್ಲ. ರಾಜ್ಯದಲ್ಲಿ ಕೇಸರಿಪಡೆಯನ್ನು ಒಂಟಿ ಕೈಯಲ್ಲಿ ಸೋಲಿಸುವ ತಾಕತ್ತು ಯಾರಿಗಾದರೂ ಇದೆ ಅಂದ್ರೆ ಅದು ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪನವರಿಗೆ ಮಾತ್ರ ಅನ್ನೊದ್ರಲ್ಲಿ ಅತಿಶಯೋಕ್ತಿ ಅಲ್ಲ. ಯಾಕೆಂದ್ರೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹೊಂದಿರುವ ಹಿಡಿತ ಅಂಥಹದ್ದು.
ಇದನ್ನ ಮನಗಂಡಿರುವ ಬಿಜೆಪಿ ಹೈಕಮಾಂಡ್, ಯಡಿಯೂರಪ್ಪನವರಿಗೆ ಒಂದು ಮಹತ್ವದ ಜವಾಬ್ದಾರಿ ನೀಡಿ ಸಿಎಂ ಸ್ಥಾನದಲ್ಲಿ ಮುಂದುವರೆಯುವ ಅವಕಾಶ ಕಲ್ಪಿಸಿಕೊಟ್ಟಿದೆ. ಹಾಗಾದ್ರೆ ಆ ಮಹತ್ವದ ಜವಾಬ್ದಾರಿ ಏನು..?
ಅದಕ್ಕೆ ಸ್ವತಃ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ಉತ್ತರ ಕೊಟ್ಟಿದ್ದು, ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಂದಿನ ಚುನಾವಣೆಯ ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ ನೀಡಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕೆಲಸ ಮಾಡಬೇಕು ಎಂದು ಚುನಾವಣೆ ಜವಾಬ್ದಾರಿಯನ್ನು ನೀಡಿದರು. ಇದೇ ಮಾತುಗಳನ್ನು ಪ್ರಧಾನಿಗಳು ನಿನ್ನೆಯ ಭೇಟಿಯಲ್ಲಿ ಹೇಳಿದ್ದರು ಎಂದು ಹೇಳುವ ಮೂಲಕ ಮುಂದಿನ ಚುನಾವಣೆ ತಮ್ಮ ನೇತೃತ್ವದಲ್ಲಿ ನಡೆಯಲಿದೆ ಎಂಬ ಸುಳಿವನ್ನು ಮುಖ್ಯಮಂತ್ರಿಗಳು ನೀಡಿದರು.
ಅಂದ್ರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ಹೊತ್ತು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಅನ್ನೋದು ರಾಜಕೀಯ ಪಂಡಿತರ ಮಾತು.