ಬೆಂಗಳೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (ಜಾತಿ ಗಣತಿ) ಬಿಜೆಪಿ ನಾಯಕರು ಬಹಿಷ್ಕಾರದ ಕರೆ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಬಿಜೆಪಿಯ ‘ಮನುವಾದಿ’ ಮನಸ್ಥಿತಿಯನ್ನು ಅನಾವರಣಗೊಳಿಸುತ್ತಿದೆ ಎಂದು ವಾಗ್ದಾಳಿ ನಡೆಸಿರುವ ಅವರು, ಕೇಂದ್ರದಲ್ಲಿ ಸ್ವತಃ ಪ್ರಧಾನಿ ಮೋದಿಯವರೇ ಜಾತಿ ಗಣತಿಗೆ ಮುಂದಾಗಿರುವಾಗ, ಅದನ್ನು ವಿರೋಧಿಸುವ ತಾಕತ್ತು ರಾಜ್ಯ ಬಿಜೆಪಿ ನಾಯಕರಿಗಿದೆಯೇ ಎಂದು ನೇರ ಸವಾಲು ಹಾಕಿದ್ದಾರೆ.
ಈ ಕುರಿತು ಖಾರವಾದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, “‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಬರೀ ಬಾಯಿ ಮಾತಿನಲ್ಲಿ ಹೇಳುವವರ ನಿಜವಾದ ಬಣ್ಣ ಈಗ ಬಯಲಾಗುತ್ತಿದೆ. ನಮ್ಮ ಸರ್ಕಾರವು ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಉದ್ದೇಶದಿಂದ ಈ ಸಮೀಕ್ಷೆ ನಡೆಸುತ್ತಿದೆ. ಆದರೆ, ಇದನ್ನು ವಿರೋಧಿಸುವ ಮೂಲಕ ಬಿಜೆಪಿ ನಾಯಕರು ಸಾರ್ವಜನಿಕರ ಮುಂದೆ ತಮ್ಮ ಬಣ್ಣವನ್ನು ತಾವೇ ಬಯಲು ಮಾಡಿಕೊಳ್ಳುತ್ತಿದ್ದಾರೆ,” ಎಂದು ಟೀಕಿಸಿದ್ದಾರೆ.
ಇದು ಎಲ್ಲರ ಪರವಾಗಿರುವ ಸಮೀಕ್ಷೆ
“ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಈ ಸಮೀಕ್ಷೆ ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದುದಲ್ಲ. ಇದು ರಾಜ್ಯದ ಏಳು ಕೋಟಿ ಕನ್ನಡಿಗರ ಸಮಗ್ರ ಸಮೀಕ್ಷೆಯಾಗಿದೆ. ಇದು ಯಾರ ವಿರುದ್ಧವೂ ಅಲ್ಲ, ಬದಲಾಗಿ ಎಲ್ಲರ ಪರವಾಗಿದೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಸಾಧಿಸಿ, ಪ್ರತಿಯೊಬ್ಬರಿಗೂ ನ್ಯಾಯಯುತ ಪಾಲು ನೀಡುವುದೇ ಇದರ ಮೂಲ ಉದ್ದೇಶ,” ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಅಂತರಂಗದಲ್ಲಿ ಮನುವಾದಿ ಮನಸ್ಥಿತಿ
ಬಿಜೆಪಿಯ ವಿರೋಧದ ಹಿಂದಿನ ಸಿದ್ಧಾಂತವನ್ನು ಕುಟುಕಿದ ಸಿದ್ದರಾಮಯ್ಯ, “ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಕೆಲವೇ ಜನರ ಕೈಯಲ್ಲಿರಬೇಕು, ಬಡವರು ಎಂದಿಗೂ ಬಡವರಾಗಿಯೇ ಉಳಿಯಬೇಕು, ಹಿಂದುಳಿದವರು ಹಿಂದೆಯೇ ಇರಬೇಕು ಮತ್ತು ಮಹಿಳೆಯರು ಅವಕಾಶ ವಂಚಿತರಾಗಿಯೇ ಕಾಲ ಕಳೆಯಬೇಕು ಎನ್ನುವುದೇ ‘ಮನುವಾದ’. ಬಿಜೆಪಿ ನಾಯಕರ ಅಂತರಂಗದಲ್ಲಿರುವುದು ಇದೇ ಮನುವಾದಿ ಮನಸ್ಥಿತಿ. ಈ ಸಮೀಕ್ಷೆಯಿಂದ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಸ್ಥಿತಿಗತಿ ಮಾತ್ರವಲ್ಲದೆ, ಮುಂದುವರಿದ ಜಾತಿಗಳಲ್ಲಿರುವ ಬಡವರ ನೈಜ ಚಿತ್ರಣವೂ ಹೊರಬರಲಿದೆ. ಈ ಸತ್ಯವನ್ನು ಎದುರಿಸಲು ಬಿಜೆಪಿ ಸಿದ್ಧವಿಲ್ಲ,” ಎಂದು ಆರೋಪಿಸಿದ್ದಾರೆ.
ಬಿಹಾರ, ತೆಲಂಗಾಣದಲ್ಲಿ ಮೌನ, ಇಲ್ಲಿ ಮಾತ್ರ ವಿರೋಧವೇಕೆ?
ಬಿಹಾರದಲ್ಲಿ ಅವರದ್ದೇ ಮೈತ್ರಿ ಸರ್ಕಾರ ಜಾತಿ ಸಮೀಕ್ಷೆ ನಡೆಸಿದೆ. ತೆಲಂಗಾಣದಲ್ಲಿಯೂ ಇದೇ ರೀತಿಯ ಸಮೀಕ್ಷೆ ನಡೆದಿದೆ. ಅಲ್ಲಿ ಬಾಯಿ ಮುಚ್ಚಿಕೊಂಡಿದ್ದ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಮಾತ್ರ ಏಕೆ ವಿರೋಧಿಸುತ್ತಿದ್ದಾರೆ? ಎಲ್ಲಕ್ಕಿಂತ ಮುಖ್ಯವಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಈಗ ದೇಶಾದ್ಯಂತ ಜಾತಿ ಗಣತಿ ನಡೆಸಲು ಹೊರಟಿದೆ,” ಎಂದು ನೆನಪಿಸಿದ್ದಾರೆ.
ದಮ್ಮು, ತಾಕತ್ತಿದ್ದರೆ ಮೋದಿ ನಿರ್ಧಾರವನ್ನೂ ವಿರೋಧಿಸಿ
“ಕರ್ನಾಟಕದಲ್ಲಿ ನಡೆಯುತ್ತಿರುವ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರೇ, ನೀವು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನೂ ವಿರೋಧಿಸುತ್ತೀರಾ? ಹಾಗೆ ವಿರೋಧಿಸುವುದಾದರೆ ಅದನ್ನು ಈಗಲೇ ಗಟ್ಟಿ ಧ್ವನಿಯಲ್ಲಿ ಹೇಳಿಬಿಡಿ. ಪ್ರಧಾನಿ ಮೋದಿಯವರ ಎದುರು ತಲೆ ಎತ್ತಿ ಮಾತನಾಡುವ ದಮ್ಮು, ತಾಕತ್ತು ಇಲ್ಲದ ನಿಮಗೆ, ಇದನ್ನು ವಿರೋಧಿಸುವ ಧೈರ್ಯವಿದೆಯೇ? ನಿಮ್ಮ ಮೂರ್ಖತನದ ಹೇಳಿಕೆಗಳಿಂದ ರಾಜ್ಯದ ಪ್ರಜ್ಞಾವಂತರ ಮುಂದೆ ನಗೆಪಾಟಲಿಗೀಡಾಗಬೇಡಿ,” ಎಂದು ಸವಾಲೆಸೆದಿದ್ದಾರೆ.
ಜನತೆಗೆ ಸಿಎಂ ಮನವಿ
ಬಿಜೆಪಿಯ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ತಿರಸ್ಕರಿಸುವಂತೆ ಜನತೆಯಲ್ಲಿ ಮನವಿ ಮಾಡಿದ ಸಿದ್ದರಾಮಯ್ಯ, “ಬಿಜೆಪಿ ನಾಯಕರ ಈ ಆತ್ಮವಂಚಕ ನಡವಳಿಕೆಯನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು. ಅವರ ಠಕ್ಕುತನದ ಹೇಳಿಕೆಗಳನ್ನು ಕಸದ ಬುಟ್ಟಿಗೆ ಎಸೆದು, ಎಲ್ಲರೂ ಈ ಐತಿಹಾಸಿಕ ಸಮೀಕ್ಷೆಯಲ್ಲಿ ಪಾಲ್ಗೊಂಡು ಸಂಪೂರ್ಣ ಸಹಕಾರ ನೀಡಬೇಕು. ನಾವೆಲ್ಲರೂ ಒಟ್ಟಾಗಿ ಒಂದು ಸಮ ಸಮಾಜವನ್ನು ನಿರ್ಮಿಸುವ ಮೂಲಕ ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡೋಣ,” ಎಂದು ವಿನಂತಿಸಿಕೊಂಡಿದ್ದಾರೆ.








