ವಿವಾಹದ ನಂತರ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ : ಹೈಕೋರ್ಟ್
ಬೆಂಗಳೂರು: ವಿವಾಹದ ನಂತರ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಹಾಗೆಯೇ, ಚುನಾವಣಾ ವಿಚಾರಗಳಿಗೆ ಸಂಬಂಧಿಸಿದಂತೆ ಗಂಡನ ಜಾತಿಯನ್ನು ಹೆಂಡತಿ ಕ್ಲೇಮು ಮಾಡಲಾಗದು ಎಂದು ಆದೇಶಿಸಿರುವ ಹೈಕೋರ್ಟ್, ತಂದೆ ಜಾತಿಯನ್ನು ಜನ್ಮದ ಆಧಾರ ಮೇಲೆ ಮಕ್ಕಳು ಪಡೆಯುತ್ತಾರೆ ಎಂದು ಸ್ಪಷ್ಟಪಡಿಸಿದೆ.
ಹಿನ್ನಲೆ: ಶಿವಮೊಗ್ಗದ ಬಾಳೆಕೊಪ್ಪ ನಿವಾಸಿ ಎಂ.ಜಿ ಅರ್ಚನಾ ಹುಟ್ಟಿನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿರದವರು. ಇವರು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿದ್ದರು. ಕಳೆದ ವರ್ಷ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಜಯಗಳಿಸಿದ್ದರು.
ನಂತರ ಇವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಅಭಿಲಾಷ್ ಎಂಬುವುರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ಶಿವಮೊಗ್ಗದ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ, ಅರ್ಚನಾ ಅವರ ಜಾತಿ ಪ್ರಮಾಣ ಪತ್ರದ ಲೋಪ ಪರಿಗಣಿಸಿ ಇವರನ್ನು ಅನೂರ್ಜಿತಗೊಳಿಸಿ 2022ರ ಫೆ.1ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಚನಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇವರು ಸಲ್ಲಿಸಿದ್ದ ಮೇಲ್ಮನವಿಗೆ ಹೈಕೋರ್ಟ್ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಪರಿಶಿಷ್ಟ ಪಂಗಡದ ವ್ಯಕ್ತಿ ಮದುವೆಯಾಗಿದ್ದು ಆತನ ಸಾಮಾಜಿಕ ಸ್ಥಾನಮಾನವೇ ತನ್ನದೂ ಆಗಿರುತ್ತದೆ.
ಅದರಂತೆ ಪತಿಯ ಜಾತಿಯೇ ತನಗೆ ಅನ್ವಯಿಸುತ್ತದೆ ಎಂದು ಅರ್ಚನಾ ವಾದಿಸಿದ್ದಾರೆ. ಸಾಮಾನ್ಯವಾಗಿ, ವ್ಯಕ್ತಿಯ ಜನ್ಮದಿಂದ ಜಾತಿ ನಿರ್ಧರಿಸಲಾಗುತ್ತದೆ. ತಂದೆ ಜಾತಿಯನ್ನು ಜನ್ಮದ ಆಧಾರ ಮೇಲೆ ಮಕ್ಕಳು ಪಡೆಯುತ್ತಾರೆ. ಆದರೆ, ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ. ಹಾಗಾಗಿ, ಪರಿಶಿಷ್ಟ ಜಾತಿ ಅಥವಾ ಪಂಗಡದಲ್ಲಿ ಹುಟ್ಟಿದವರು ಮಾತ್ರ ಆ ಜಾತಿಗೆ ಮೀಸಲು ಆಗಿರುವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.
ಆದರೆ, ಇತ್ತ ಚುನಾವಣಾ ನ್ಯಾಯಾಧಿಕರಣದಲ್ಲಿ ವಾದ ಮಂಡನೆಗೆ ತನಗೆ ಸೂಕ್ತ ಅವಕಾಶ ನೀಡಿಲ್ಲ ಎಂದು ಅರ್ಚನಾ ಆರೋಪಿಸುತ್ತಾರೆ. ಸೂಕ್ತ ಅವಕಾಶ ನೀಡಿದ್ದರೂ ಗೈರಾಗುವ ಮೂಲಕ ವಿಚಾರಣೆಗೆ ಸಹಕರಿಸಿಲ್ಲ. ಅರ್ಚನಾ ಜನಪ್ರತಿನಿಧಿಯಾಗಿದ್ದಾರೆ ಹೊರತು ಉದಾರತೆ ತೋರಲು ಬಡ ರೈತ ಮಹಿಳೆ ಅಥವಾ ಕೂಲಿ ಕಾರ್ಮಿಕಳಲ್ಲ ಎಂದು ನ್ಯಾಯಾಲಯ ಹೇಳಿದೆ. ಚುನಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಮಾನತೆ ಮತ್ತು ಸಾಮಾನ್ಯ ಕಾನೂನು ತತ್ವಗಳಿಗೆ ಸ್ಥಳಾವಕಾಶವಿಲ್ಲ ಎಂಬ ಸರ್ಕಾರಿ ವಕೀಲರ ವಾದವು ನ್ಯಾಯಸಮ್ಮತವಾಗಿದೆ ಎಂದೂ ಅಭಿಪ್ರಾಯಪಟ್ಟ ಹೈಕೋರ್ಟ್ ಅರ್ಜಿ ತಿರಸ್ಕರಿಸಿದೆ.