ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೊಳಗೊಂಡ ಜಾತಿ ಗಣತಿ ವರದಿ ಈಗಾಗಲೇ ಸರ್ಕಾರದ ಕೈ ಸೇರಿದ್ದು, ಚರ್ಚೆಗಳು ಆರಂಭವಾಗಿವೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಈ ವರದಿ ನೀಡಿದ್ದು, ವರದಿಯ ಕೆಲವು ಅಂಶಗಳು ಸೋರಿಕೆಯಾಗಿವೆ. 6 ಕೋಟಿ ಕನ್ನಡಿಗರಲ್ಲಿ ಪ್ರಬಲ ಸಮುದಾಯಗಳಿಗಿಂತ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ (ಅಹಿಂದ ವರ್ಗ) ಹೆಚ್ಚಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಎಸ್ಸಿ ಸಮುದಾಯ ಹೆಚ್ಚು (1.08 ಕೋಟಿ) ಹೊಂದಿದೆ. ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯ ಇದೆ. ಮೂರನೇ ಸ್ಥಾನದಲ್ಲಿ ಲಿಂಗಾಯತ ಹಾಗೂ ನಾಲ್ಕನೇ ಸ್ಥಾನದಲ್ಲಿ ಒಕ್ಕಲಿಗ ಸಮುದಾಯ ಇದೆ. 5.98 ಕೋಟಿ ಜನ ಸಮೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 32 ಲಕ್ಷ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ.
ಸದ್ಯದ ಮಾಹಿತಿಯಂತೆ ಕುರುಬ ಸಮುದಾಯ ಅತೀ ಹಿಂದುಳಿದ ಸಮುದಾಯವಾಗಿದೆ. ಅಹಿಂದ ವರ್ಗದವರು 3.96 ಕೋಟಿಯಷ್ಟಿದ್ದಾರೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರರ ಸಂಖ್ಯೆ 1.87 ಕೋಟಿಯಷ್ಟಿದೆ. ಒಟ್ಟು 816 ಇನ್ನಿತರ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ. ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಅಲ್ಲದೇ, ಹೊಸದಾಗಿ 192 ಜಾತಿಗಳನ್ನು ದಾಖಲಿಸಲಾಗಿದೆ. ಜಾತಿವಾರು ಜನಸಂಖ್ಯೆ ನೋಡುವುದಾದರೆ ಎಸ್ಸಿ 1.08 ಕೋಟಿ, ಮುಸ್ಲಿಂ- 70 ಲಕ್ಷ, ಲಿಂಗಾಯತ- 65 ಲಕ್ಷ, ಒಕ್ಕಲಿಗ- 60 ಲಕ್ಷ, ಕುರುಬರು- 45 ಲಕ್ಷ, ಈಡಿಗ- 15 ಲಕ್ಷ, ಎಸ್ಟಿ 40.45 ಲಕ್ಷ, ವಿಶ್ವಕರ್ಮ- 15, ಬೆಸ್ತ- 15, ಬ್ರಾಹ್ಮಣ- 14, ಗೊಲ್ಲ (ಯಾದವ) – 10, ಮಡಿವಾಳ ಸಮಾಜ – 6, ಅರೆ ಅಲೆಮಾರಿ – 6 ಲಕ್ಷ, ಕುಂಬಾರ – 5, ಸವಿತಾ ಸಮಾಜ – 5 ಲಕ್ಷ ಜನಸಂಖ್ಯೆ ಹೊಂದಿವೆ.