ಬೆಂಗಳೂರು: ಕನಕಪುರ ಬಂಡೆ, ಟ್ರಬಲ್ ಶೂಟರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಹೋದರ ಸಂಸದ ಡಿ.ಕೆ ಸುರೇಶ್ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿ.ಕೆ ಶಿವಕುಮಾರ್ ಮನೆ ಮೇಲೆ ಐವರು ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಮತ್ತೊಂದೆ, ಸಂಸದ ಡಿ.ಕೆ ಸುರೇಶ್ ಅವರ ಕನಕಪುರ ತಾಲೂಕಿನ ಕೆಂಚೇನಹಳ್ಳಿ ಮನೆ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಬೆಳಿಗೆ 6 ಗಂಟೆಗೆ ದಾಳಿ ಮಾಡಿದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಗೆ ಅಖಾಡ ಸಿದ್ದವಾಗಿರುವ ಬೆನ್ನಲ್ಲೇ ಸಿಬಿಐ ದಾಳಿ ನಡೆದಿದೆ.
ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ಕಳೆದ ವರ್ಷ ಡಿ.ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಐಟಿ ದಾಳಿ ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದರು. ದೆಹಲಿಯ ತಿಹಾರ್ ಜೈಲಿನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದ ಡಿ.ಕೆ ಶಿವಕುಮಾರ್, ಜಾಮೀನಿನ ಮೇಲೆ ಹೊರ ಬಂದಿದ್ದರು.
ಕಳೆದ ವರ್ಷ ಅಧಿಕಾರಕ್ಕೆ ಬಂದಿಸಿದ್ದ ಬಿಎಸ್‍ವೈ ಸರ್ಕಾರ ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಸಿಬಿಐ ತನಿಖೆ ಪ್ರಶ್ನಿಸಿ ಡಿ.ಕೆ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಿಬಿಐ ತನಿಖೆ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್‍ನ ಏಕ ಸದಸ್ಯ ಪೀಠ, ದ್ವಿಸದಸ್ಯ ಪೀಠಗಳು ವಜಾ ಮಾಡಿದ್ದವು. ಆದರೂ ಮತ್ತೊಮ್ಮೆ ಡಿ.ಕೆ ಶಿವಕುಮಾರ್ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.