Cheetah | ಚೀತಾ ಸ್ಥಳಾಂತರಕ್ಕೆ 75 ಕೋಟಿ ಖರ್ಚು !
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಭಾಗವಾಗಿ ಭಾರತದಲ್ಲಿ ಕಳೆದ 7 ದಶಕಗಳ ಹಿಂದೆ ನಶಿಸಿ ಹೋಗಿದ್ದ ಚೀತಾಗಳನ್ನು ನಮೀಬಿಯಾದಿಂದ ಭಾರತಕ್ಕೆ ತರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದ್ದಾರೆ.
ಎರಡರಿಂದ ಆರು ವರ್ಷ ವಯಸ್ಸಿನ ಮೂರು ಗಂಡು, ಐದು ಹೆಣ್ಣು ಚೀತಾಗಳನ್ನು ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ತರಲಾಗಿದೆ.
ಸುಮಾರು ಎಂಟು ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿ ಚೀತಾಗಳು ಭಾರತಕ್ಕೆ ಬಂದಿವೆ.
ಮೊದಲು ಜಂಬೋ ಜೆಟ್ ಮೂಲಕ ಚೀತಾಗಳನ್ನು ಗ್ವಾಲಿಯಾರ್ ನಿಲ್ದಾಣಕ್ಕೆ ತರಲಾಗಿದ್ದು, ಇದಾದ ಬಳಿಕ ಹೆಲಿಕಾಪ್ಟರ್ ಮೂಲಕ ಕುನ್ಹೋ ನ್ಯಾಷನಲ್ ಪಾರ್ಕ್ ಗೆ ಚೀತಾಗಳನ್ನು ಸ್ಥಳಾಂತರ ಮಾಡಲಾಗಿದೆ.
ಈ ಚೀತಾಗಳನ್ನು ವಿಮಾನಕ್ಕೆ ಹತ್ತಿಸುವ ಮುನ್ನಾ ಒಂದು ತಿಂಗಳು ಕಾಲ ಕ್ವಾರಂಟೈನ್ ಮಾಡಲಾಗಿತ್ತು.
ಯಾವುದೇ ಸೋಂಕು ತಾಕದಂತೆ ಎಚ್ಚರ ವಹಿಸಲಾಗಿತ್ತು. ಈ ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲ ಸಮಯ ಹಿಡಿಯುತ್ತದೆ.
ಸಾಮಾನ್ಯವಾಗಿ ನಮ್ಮಲ್ಲಿ ಕಾಣಸಿಗುವ ಚಿರತೆಗಳು ಹಾಗೂ ಸದ್ಯ ಭಾರತಕ್ಕೆ ಭಾರತಕ್ಕೆ ಬಂದಿರುವ ಚೀತಾಗಳು ನೋಡಲು ಒಂದೇ ರೀತಿ ಕಂಡರೂ, ಮಚ್ಚೆ ಗುರುತಿನ ಈ ಚೀತಾಗಳ ಸಂತತಿ ಭಾರತದಲ್ಲಿ 70 ವರ್ಷಗಳ ಹಿಂದೆಯೇ ನಾಶವಾಗಿತ್ತು.
1947 ರಲ್ಲಿ ಭಾರತದಲ್ಲಿದ್ದ ಕೊನೆಯ ಚೀತಾ ಮೃತಪಟ್ಟಿತ್ತು. 1952ರಲ್ಲಿ ಈ ಪ್ರಭೇದ ಭಾರತದಲ್ಲಿ ಇಲ್ಲ ಎಂದು ಘೋಷಣೆ ಮಾಡಲಾಗಿತ್ತು.

ಅಂದಹಾಗೆ ಸದ್ಯ ಭಾರತಕ್ಕೆ ಬಂದಿರುವ ಚೀತಾಗಳಿಗೆ ಕುನ್ಹೋ ಉದ್ಯಾನವನ ಪರಿಸರ ಅನುಕೂಲಕರವಾಗಿದೆ.
ಹೀಗಾಗಿ ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.
ಹಾಗೇ ಈ ಎಂಟು ಚೀತಾಗಳ ಸ್ಥಳಾಂತರಕ್ಕೆ ಸುಮಾರು 75 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.