ಟೀಮ್ ಇಂಡಿಯಾದಲ್ಲಿ ಚೇತೇಶ್ವರ ಪೂಜಾರ ನ ಸ್ಥಾನ ಅಲುಗಾಡುತ್ತಿದೆ..?
ಚೇತೇಶ್ವರ ಪೂಜಾರ.. ಪಕ್ಕಾ ಟೆಸ್ಟ್ ಕ್ರಿಕೆಟಿಗ. ಎದುರಾಳಿ ಬೌಲರ್ ಗನ್ನು ಕಾಡುವ ರೀತಿಯನ್ನು ಮೆಚ್ಚಲೇಬೇಕು. ಆಧುನಿಕ ಕ್ರಿಕೆಟ್ ನಲ್ಲಿ ಸಾಂಪ್ರಾಯಿಕ ಟೆಸ್ಟ್ ಪಂದ್ಯದ ಬ್ಯಾಟಿಂಗ್ ವೈಖರಿಯನ್ನು ಚೇತೇಶ್ವರ ಪೂಜಾರ ಅವರ ಬ್ಯಾಟಿಂಗ್ ನಲ್ಲಿ ನೋಡಬಹುದಾಗಿದೆ.
ಆದ್ರೆ ಚೇತೇಶ್ವರ ಪೂಜಾರ ಅವರ ಬ್ಯಾಟ್ ನಿಂದ ಸರಾಗವಾಗಿ ರನ್ ಗಳು ಬರುತ್ತಿಲ್ಲ. ಎದುರಾಳಿ ಬೌಲರ್ ಗಳನ್ನು ತಾಳ್ಮೆಯನ್ನು ಪರೀಕ್ಷೆಯನ್ನು ಮಾಡುವ ಪೂಜಾರ ಇತ್ತೀಚಿನ ದಿನಗಳಲ್ಲಿ ರನ್ ಗಳಿಸುವುದನ್ನು ಮರೆತಂತೆ ಆಡುತ್ತಿದ್ದಾರೆ.
ಹೌದು, ಟೆಸ್ಟ್ ಕ್ರಿಕೆಟ್ ನಲ್ಲಿ ಒಂದು ರೀತಿಯ ತಂತ್ರವಿದೆ. ಕೆಟ್ಟ ಎಸೆತಗಳಿಗೆ ರನ್ ಗಳಿಸುವುದು.. ಒಳ್ಳೆಯ ಎಸೆತಗಳಿಗೆ ಬೌಲರ್ ಗಳಿಗೆ ಗೌರವ ನೀಡುವುದು.. ಹಾಗಂತ ಬೌಲರ್ ನ ಪ್ರತಿ ಎಸೆತಗಳನ್ನು ರಕ್ಷಣಾತ್ನಕವಾಗಿ ಆಡುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೂಡ ಮೂಡುತ್ತಿದೆ.
ಚೇತೇಶ್ವರ ಪೂಜಾರ ಅವರ ಬ್ಯಾಟಿಂಗ್ ವೈಖರಿಯ ಬಗ್ಗೆ ಪ್ರಶ್ನೆ ಮಾಡುವುದು ಸರಿಯಲ್ಲ. ಆದ್ರೆ ಸತತವಾಗಿ ರನ್ ಗಳಿಸದೇ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದಾಗ ಸಹಜವಾಗಿ ತಂಡ ಒತ್ತಡಕ್ಕೆ ಸಿಲುಕುತ್ತದೆ. ಸಹ ಬ್ಯಾಟ್ಸ್ ಮೆನ್ ಕೂಡ ತಾಳ್ಮೆಯನ್ನು ಕಳೆದುಕೊಳ್ಳುತ್ತಾನೆ. ಎದುರಾಳಿ ತಂಡ ಇನ್ನಷ್ಟು ಒತ್ತಡಕ್ಕೆ ಸಿಲುಕಿಸುವಂತೆ ಬೌಲಿಂಗ್ ಮಾಡುತ್ತಾರೆ.
ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲೂ ಅಷ್ಟೇ.. ಚೇತೇಶ್ವರ ಪೂಜಾರ ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ರು. ಮೊದಲ ಇನಿಂಗ್ಸ್ ನಲ್ಲಿ ಪೂಜಾರ ಗಳಿಸಿದ್ದು ಕೇವಲ ಎಂಟು ರನ್ ಮಾತ್ರ. ಅದು ಕೂಡ 54 ಎಸೆತಗಳಲ್ಲಿ. ದಾಖಲಿಸಿರುವ ಎಂಟು ರನ್ ಗಳು ಬಂದಿರೊದು ಕೂಡ ಎರಡು ಬೌಂಡ್ರಿಗಳಿಂದ. ಅಂದ್ರೆ ಇನ್ನುಳಿದ 52 ಎಸೆತಗಳಲ್ಲಿ ಒಂದೇ ಒಂದು ರನ್ ಗಳಿಸಿಲ್ಲ. ಎರಡನೇ ವಿಕೆಟ್ ಗೆ ರೋಹಿತ್ ಜೊತೆ 25 ರನ್ ಗಳ ಜೊತೆಯಾಟವನ್ನು ಆಡಿದ್ದರು. ಇದ್ರಲ್ಲಿ ಪೂಜಾರ ಕಾಣಿಕೆ ಎಂಟು ರನ್ ಮಾತ್ರ.
ಇನ್ನು ಎರಡನೇ ಇನಿಂಗ್ಸ್ ನಲ್ಲೂ ಅಷ್ಟೇ..ಪೂಜಾರ ಗಳಿಸಿದ್ದ ರನ್ 15. ಎದುರಿಸಿದ್ದ ಎಸೆತಗಳು 80. ಇಲ್ಲೂ ಕೂಡ ಎರಡು ಬೌಂಡರಿಗಳನ್ನು ದಾಖಲಿಸಿದ್ದರು. ಅಂದ್ರೆ 78 ಎಸತೆಗಳಲ್ಲಿ ಗಳಿಸಿದ್ದು ಏಳು ರನ್ ಗಳನ್ನು ಮಾತ್ರ. ಇಲ್ಲಿ ರೋಹಿತ್ ಶರ್ಮಾ ಜೊತೆ 27 ರನ್ ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಕೊಹ್ಲಿ ಜೊತೆ ಮೂರನೇ ವಿಕೆಟ್ಗೆ 20 ರನ್ ಕಲೆ ಹಾಕಿದ್ದರು.
ನಿಜ, ತಂಡ ಸಂಕಷ್ಟದಲ್ಲಿದ್ದಾಗ ತಂಡವನ್ನು ಅಪಾಯದಿಂದ ಪಾರು ಮಾಡುವುದು ಪ್ರತಿ ಆಟಗಾರನ ಜವಾಬ್ದಾರಿ. ಹಾಗಂತ ಹೆಚ್ಚಿನ ರಕ್ಷಣಾತ್ಮಕ ಆಟವೂ ಕೂಡ ಕೆಲವೊಂದು ಬಾರಿ ತಂಡಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಚೇತೇಶ್ವರ ಪೂಜಾರ ಸುಮಾರು 22 ಓವರ್ ಗಳನ್ನು ಆಡಿದ್ದಾರೆ. 23 ರನ್ ದಾಖಲಿಸಿದ್ದಾರೆ. ಅಂದ್ರೆ ಸರಾಸರಿ ಓವರ್ಗೆ ಒಂದು ರನ್ ಅಂತ ಹೇಳಬಹುದು.
ಹಾಗಂತ ಚೇತೇಶ್ವರ ಪೂಜಾರ ಅವರ ಹಳೆಯ ಆಟವನ್ನು ಕೂಡ ಮರೆಯುವಂತಿಲ್ಲ. ಕ್ರೀಸ್ ಗೆ ಅಂಟಿಕೊಂಡು ತಂಡಕ್ಕೆ ಅಮೋಘ ಗೆಲುವನ್ನು ದಕ್ಕಿಸಿಕೊಟ್ಟಿದ್ದಾರೆ. ಕಳೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಯಲ್ಲೂ ಅಷ್ಟೇ.. ಮಹತ್ವದ ಘಟ್ಟದಲ್ಲಿ ರಕ್ಷಣಾತ್ಮಕವಾಗಿ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆದ್ರೆ ಚೇತೇಶ್ವರ ಪೂಜಾರ ಅವರು ವಿಕೆಟ್ ರೊಟೇಟ್ ಮಾಡ್ಕೊಂಡು ಆಡಿದ್ರೆ ಸುಲಭವಾಗಿ ಎದುರಾಳಿ ತಂಡಕ್ಕೆ ಒತ್ತಡ ಹೇರಬಹುದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರಿಷಬ್ ಪಂತ್ ನಂತಹ ಬ್ಯಾಟ್ಸ್ ಮೆನ್ ಗಳು ಎದುರಾಳಿ ತಂಡಕ್ಕೆ ಇನ್ನಷ್ಟು ಅಪಾಯಕಾರಿಯಾಗಬಹುದು.
33ರ ಹರೆಯದ ಚೇತೇಶ್ವರ ಪೂಜಾರ ಅವರು 86 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 46ರ ಸರಾಸರಿಯಲ್ಲಿ 6267 ರನ್ ಕಲೆ ಹಾಕಿದ್ದಾರೆ. 2010ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಪೂಜಾರ, ಒಟ್ಟು 14,038 ಎಸೆತಗಳನ್ನು ಎದುರಿಸಿದ್ದಾರೆ. ಇದ್ರಲ್ಲಿ ಮೂರು ದ್ವಿಶತಕ ಸೇರಿ 18 ಶತಕಗಳಿವೆ. 29 ಅರ್ಧಶತಕಗಳಿವೆ. 740 ಬೌಂಡರಿ ಮತ್ತು 14 ಸಿಕ್ಸರ್ ಗಳನ್ನು ದಾಖಲಿಸಿದ್ದಾರೆ.
2013ರಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಪೂಜಾರ, ಆಡಿರುವುದು ಐದು ಪಂದ್ಯಗಳನ್ನು ಮಾತ್ರ. 2014ರ ನಂತರ ಪೂಜಾರ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಒಟ್ಟಿನಲ್ಲಿ ಟೀಮ್ ಇಂಡಿಯಾದ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ನ ಕೊನೆಯ ಕೊಂಡಿಯಾಗಿ ಪೂಜಾರ ಕಾಣಿಸಿಕೊಳ್ಳುತ್ತಾರೆ. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಗಟ್ಟಿಯಾಗಿ ನಿಂತು ಆಡುವಂತಹ ಬ್ಯಾಟ್ಸ್ ಮೆನ್ ಗಳಲ್ಲಿ ಪೂಜಾರ ಕೂಡ ಒಬ್ಬರಾಗಿದ್ದಾರೆ.
ಆದ್ರೆ ಪೂಜಾರ ಅವರು ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಆದ್ಯತೆ ಕೊಡುತ್ತಿರುವುದರಿಂದ ಅವರ ಸ್ಥಾನವೂ ಅಲುಗಾಡುತ್ತಿದೆ. ಈಗಾಗಲೇ ಪೂಜಾರ ಬದಲು ಕೆ.ಎಲ್. ರಾಹುಲ್ ಗೆ ಅವಕಾಶ ನೀಡಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಏನೇ ಆಗ್ಲಿ, ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ನೀರಸ ಆಟವನ್ನಾಡಿದ್ದಾರೆ ಎಂಬ ಕಾರಣಕ್ಕೆ ಅವರ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ಪ್ರಶ್ನೆ ಮಾಡಬಾರದು. ಆದ್ರೂ ಭವಿಷ್ಯದ ಟೀಮ್ ಇಂಡಿಯಾದಲ್ಲಿ ಚೇತೇಶ್ವರ ಪೂಜಾರ ಅವರ ಸ್ಥಾನ ಮಾತ್ರ ಗ್ಯಾರಂಟಿ ಇಲ್ಲ ಎಂಬುದು ಮಾತ್ರ ಸುಳ್ಳಲ್ಲ.