Chikkaballapura | ಚಿಕ್ಕಬಳ್ಳಾಪುರದ ಮೆಗಾ ಆರೋಗ್ಯ ಮೇಳ ವಿಶ್ವದಾಖಲೆಯಾಗುತ್ತದೆ: ಡಾ. ಕೆ. ಸುಧಾಕರ್

1 min read

Chikkaballapura | ಚಿಕ್ಕಬಳ್ಳಾಪುರದ ಮೆಗಾ ಆರೋಗ್ಯ ಮೇಳ ವಿಶ್ವದಾಖಲೆಯಾಗುತ್ತದೆ: ಡಾ. ಕೆ. ಸುಧಾಕರ್

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಆಯೋಜನೆಯಾಗಿರುವ ಮೆಗಾ ಆರೋಗ್ಯ ಮೇಳ ಹೊಸ ವಿಶ್ವದಾಖಲೆ ಸೃಷ್ಟಿಸಲಿದೆ. ಒಂದೇ ಸೂರಿನಡಿ ಆರೋಗ್ಯ ಸಂಬಂಧಿತ ಎಲ್ಲಾ ವ್ಯವಸ್ಥೆಗಳು ದೊರೆಯಲಿದ್ದು, ಒಂದೂವರೆ ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಸಂಸ್ಥೆಯ ಆವರಣದಲ್ಲಿ ಮೆಗಾ ಆರೋಗ್ಯ ಮೇಳದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ಡಾ. ಕೆ. ಸುಧಾಕರ್ ಫೌಂಡೇಷನ್ ಸೇರಿಕೊಂಡು ಈ ಬೃಹತ್ ಆರೋಗ್ಯ ಮೇಳವನ್ನು ಆಯೋಜಿಸಿದೆ. ಮೇ 14 ಮತ್ತು 15 ರಂದು ಈ ಮೇಳ ನಡೆಯಲಿದ್ದು, ಸುಮಾರು ಒಂದೂವರೆ ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಬೃಹತ್ ಆರೋಗ್ಯ ಮೇಳಕ್ಕೆ ಈಗಾಗಲೇ 1.25 ಲಕ್ಷ ಜನರು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳದಲ್ಲೇ ನೋಂದಣಿಗೆ ಅವಕಾಶವಿದ್ದು ಅದಕ್ಕಾಗಿ ಸುಮಾರು 50 ಕೌಂಟರ್ ಗಳನ್ನು ಕೂಡ ತೆರೆಯಲಾಗಿದೆ. ಈ ಹಿಂದೆ 73,000 ಜನರುಒಂದೇ ಜಾಗದಲ್ಲಿ ನಡೆದ ಆರೋಗ್ಯ ಮೇಳದಲ್ಲಿ ಭಾಗವಹಿಸಿದ ದಾಖಲೆ ಇದೆ. ಆದರೆ ಚಿಕ್ಕಬಳ್ಳಾಪುರದ ಈ ಆರೋಗ್ಯ ಮೇಳದ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

2 ದಿನಗಳ ಕಾಲ ನಡೆಯುವ ಈ ಆರೋಗ್ಯ ಮೇಳದಲ್ಲಿ ಒಂದೇ ಸೂರಿನಡಿ ತಪಾಣೆ, ಚಿಕಿತ್ಸೆ ಸೇರಿ ಎಲ್ಲವೂ ಉಚಿತವಾಗಿ ಸಿಗಲಿದೆ. ಅಷ್ಟೇ ಅಲ್ಲದೆ ಶಸ್ತ್ರ ಚಿಕಿತ್ಸೆಯ ಅನಿವಾರ್ಯತೆ ಇದ್ದರೆ ಅಂತಹವರನ್ನು ಸೂಕ್ತ ಆಸ್ಪತ್ರೆಗೆ ಅಥವಾ ವೈದ್ಯಕೀಯ ಸಂಸ್ಥೆಗೆ ರೆಫರ್ ಮಾಡಿ, ಅವರಿಗೆ ಚಿಕಿತ್ಸೆ ಕೊಡಿಸಿ ಅವರನ್ನು ಮತ್ತೆ ಮನೆಗೆ ತರುವ ವ್ಯವಸ್ಥೆ ಮಾಡಲಾಗುವುದು. ಇದು ನೋಡುವವರ ಕಣ್ಣಿಗೆ ನಡೆಯುವ ಆರೋಗ್ಯ ಮೇಳವಲ್ಲ. ಬದಲಾಗಿ ಇದರ ಲಾಭ ಸಂಪೂರ್ಣವಾಗಿ ಜನರಿಗೆ ಸಿಗಬೇಕು ಅನ್ನುವ ಉದ್ದೇಶದಿಂದ ನಡೆಯುವ ಕಾರ್ಯಕ್ರಮ ಎಂದು ಹೇಳಿದರು.

Chikkaballapur Mega Health Fair Dr K Sudhakar saaksha tv
Chikkaballapur Mega Health Fair Dr K Sudhakar saaksha tv

ಈ ಆರೋಗ್ಯ ಮೇಳದಲ್ಲಿ 2 ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಲಿದ್ದಾರೆ. ಈ ಪೈಕಿ 500ಕ್ಕೂ ಅಧಿಕ ಸ್ಪೆಷಲಿಸ್ಟ್ ವೈದ್ಯರು ಇರಲಿದ್ದಾರೆ. 2500ಕ್ಕೂ ಅಧಿಕ ನರ್ಸಿಂಗ್ ಅಫೀಷಿಯಲ್ಸ್, ಆಶಾ ಕಾರ್ಯಕರ್ತರು, ತಾಂತ್ರಿಕ ವರ್ಗದವರು, ಹಿರಿಯ ಅಧಿಕಾರಿಗಳು ಈ ಮೇಳದ ಯಶಸ್ಸಿಗೆ ಶ್ರಮಿಸಲಿದ್ದಾರೆ ಎಂದು ಹೇಳಿರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ. ಎಲ್. ಸಂತೋಷ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭಾನುವಾರ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೇಳದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಅಸಾಂಕ್ರಾಮಿಕ ರೋಗಗಳಾದ ಬಿ.ಪಿ. ಶುಗರ್ ಮತ್ತಿತರ ಕಾಯಿಲೆಗಳಿಗೆ ಒಂದೇ ಸೂರಿನಡಿ, ಜಿಲ್ಲೆಯ ಎಲ್ಲಾ ಜನರಿಗೆ ಒಂದೇ ಬಾರಿಗೆ ಹೇಗೆ ತಪಾಸಣೆ ಹಾಗೂ ಚಿಕಿತ್ಸೆ ನೀಡಬಹುದು ಅನ್ನುವುದರ ಬಗ್ಗೆ ಪ್ರಾಯೋಗಿಕವಾಗಿ ಈ ಮೇಳವನ್ನು ಆಯೋಜಿಸಲಾಗಿದೆ. ಈಗಾಗಲೇ ನೋಂದಾಣಿ ಆಗಿರುವ ಶೇಕಡಾ 80 ರಷ್ಟು ಜನರ ರಕ್ತ ಪರೀಕ್ಷೆಗಳು ಮುಗಿದು ವರದಿ ಕೈಯಲ್ಲಿದೆ. ಈ ಮಾಹಿತಿಯನ್ನು ಆಧರಿಸಿ ಅವರು ಯಾವ ವಿಭಾಗಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು ಅನ್ನುವ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಲಾಗುವುದು. ಶೇಕಡಾ 25 ರಷ್ಟು ಸಾವುಗಳು ಅಸಾಂಕ್ರಾಮಿಕ ರೋಗಗಳಿಂದ ಆಗುತ್ತದೆ. ಶೀಘ್ರ ತಪಾಸಣೆ ಹಾಗೂ ಚಿಕಿತ್ಸೆಯಿಂದ ಇದಕ್ಕೆ ಕಡಿವಾಣ ಹಾಕಬಹುದು ಎಂದು ತಿಳಿಸಿದರು.

30 ವರ್ಷಕ್ಕೂ ಮೇಲ್ಪಟ್ಟವರು ವರ್ಷಕ್ಕೊಂದು ಬಾರಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರಾಜ್ಯದ 163 ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯಿಂದ ಒಂದು ವಾರದ ಸಪ್ತಾಹ ಮಾಡಲಾಗಿತ್ತು. ಸರ್ಕಾರ 2 ಲಕ್ಷ ರೂಪಾಯಿ ಧನಸಹಾಯ ಕೂಡ ನೀಡಿತ್ತು. ಈ ಮೂಲಕ ರೋಗ ಬರುವುದಕ್ಕೆ ಮೊದಲೇ ಪತ್ತೆ ಹಚ್ಚುವಿಕೆ ಹಾಗೂ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಜನರ ಆರೋಗ್ಯ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಚಿಕ್ಕಬಳ್ಳಾಪುರದ ಈ ಆರೋಗ್ಯ ಮೇಳದಲ್ಲಿ ಕಣ್ಣು, ಬಾಯಿ, ದಂತ ಚಿಕಿತ್ಸೆ ಸೇರಿದಂತೆ ಎಲ್ಲದಕ್ಕೂ ಒಂದೇ ಸೂರಿನಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಯುಷ್ ನ ರೋಗ ನಿರೋಧಕ ಕಿಟ್​​, ಕನ್ನಡಕ ಸೇರಿದಂತೆ ಅಗತ್ಯವಿರುವವರಿಗೆ 2 ತಿಂಗಳ ಉಚಿತ ಔಷಧಿಗಳನ್ನು ಕೂಡ ನೀಡಲಾಗುತ್ತದೆ ಎಂದು ಹೇಳಿದರು.

ಆರೋಗ್ಯ ಮೇಳದಲ್ಲಿ ಸ್ಥಳದಲ್ಲೇ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್, 3ನೇ ಡೋಸ್ ಕೊರೊನಾ ಲಸಿಕೆ ಕೂಡ ನೀಡಲಾಗುತ್ತದೆ. ಜನರ ಆರೋಗ್ಯ ಸುಧಾರಣೆಯಿಂದ ಸಮಾಜದ ಸ್ವಾಸ್ಥ್ಯ ಉತ್ತಮವಾಗುತ್ತದೆ. ದೇಶದ ಅಭಿವೃದ್ಧಿ ಜನರ ಆರೋಗ್ಯವೂ ಅತೀ ಮುಖ್ಯ ಎಂದು ಹೇಳಿದರು. Chikkaballapur Mega Health Fair Dr K Sudhakar

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd