ಬೆಂಗಳೂರು: ತಂದೆ ಚಲಾಯಿಸುತ್ತಿದ್ದ ಕಾರು ಮಗಳ ಮೇಲೆಯೇ ಹರಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನ ಆಗರದಲ್ಲಿ ನಡೆದಿದೆ. ಒಂದೂವರೆ ವರ್ಷದ ಶೈಜಾ ಜನ್ನತ್ ಮೃತ ಮಗು ಎನ್ನಲಾಗಿದೆ.
ಸಂಬಂಧಿಕರ ಮದುವೆಗೆಂದು ಕುಟುಂಬಸ್ಥರು ಚನ್ನಪಟ್ಟಣಕ್ಕೆ ತೆರಳಿ ಭಾನುವಾರ ರಾತ್ರಿ 11.30ರ ವೇಳೆಗೆ ಬಂದಿದ್ದರು. ಈ ವೇಳೆ ಕಾರಿನಿಂದ ಇಳಿದು ಎಲ್ಲರೂ ಮನೆಯೊಳಗೆ ಹೋಗಿದ್ದಾರೆ. ಮಗುವಿನ ತಂದೆ ಕಾರಿನಿಂದ ಲಗೇಜ್ ತೆಗೆದು ಮನೆಯೊಳಗೆ ಇಡುತ್ತಿದ್ದರು. ಈ ವೇಳೆ ಮಗು ತಂದೆಯ ಹತ್ತಿರ ಓಡಿ ಬಂದಿದೆ. ಇದನ್ನು ತಂದೆ ಗಮನಿಸಿಲ್ಲ.
ಕಾರಿನಲ್ಲಿದ್ದ ಲಗೇಜ್ ಮನೆಯೊಳಗೆ ಇಡುತ್ತಿದ್ದ ಸಂದರ್ಭದಲ್ಲಿ ಓಡಿ ಬಂದ ಮಗು ಡೋರ್ ಬಳಿಯೇ ನಿಂತಿದೆ. ಇದನ್ನು ಗಮನಿಸದ ತಂದೆ ಲಗೇಜ್ ತೆಗೆದು ಕಾರು ಚಾಲನೆ ಮಾಡಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಾರು ಮಗುವಿನ ಮೇಲೆ ಹರಿದು, ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಈ ಕುರಿತು ಹೆಚ್ಎಸ್ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.