ಕೊರೋನಾ ಸೋಂಕು ಪರಿಸ್ಥಿತಿಯ ಗಂಭೀರತೆಯನ್ನು ಹೊರಜಗತ್ತಿಗೆ ಮುಚ್ಚಿಟ್ಟು ವಿಶ್ವದಾದ್ಯಂತ ಆಕ್ರೋಶಕ್ಕೆ ಗುರಿಯಾಗಿರುವ ಸೋಂಕಿನ ಕೇಂದ್ರ ಚೀನಾ ಮತ್ತೊಮ್ಮೆ ತನ್ನ ನೀಚ ಬುದ್ಧಿಯಿಂದ ಟೀಕೆಗೆ ಗುರಿಯಾಗಿದೆ.
ಭಾರತವೂ ಸೇರಿದಂತೆ ಕೊರೊನಾ ಬಾಧಿತ ರಾಷ್ಟ್ರಗಳಿಗೆ ಕಳಪೆ ಕೊರೋನಾ ಪರೀಕ್ಷಾ ಕಿಟ್ ಕಳುಹಿಸಿದ್ದು, ಅದು ಲೋಪ ದೋಷಗಳಿಂದ ಕೂಡಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಚೀನಾದಿಂದ ಅಮದಾಗಿರುವ ಕೊರೊನಾ ಪರೀಕ್ಷಾ ಕಿಟ್ ಗಳು ದೋಷಪೂರಿತವಾಗಿದ್ದು, 2 ದಿನ ಯಾರೂ ರ‍್ಯಾಪಿಡ್ ಟೆಸ್ಟ್ ಕೈಗೊಳ್ಳಬೇಡಿ ಎಂದು ಸೂಚಿಸಿದೆ.
ಈಗಾಗಲೇ ರಾಜಸ್ಥಾನ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳು ರ‍್ಯಾಪಿಡ್ ಟೆಸ್ಟ್ ಕಿಟ್ ಗಳ ಫಲಿತಾಂಶದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿರುವುದಾಗಿ ಆರೋಪಿಸಿದ್ದು, ಇಂಥ ಕಿಟ್ ಗಳ ಬಳಕೆ ನಿಲ್ಲಿಸುತ್ತಿರುವುದಾಗಿ ಐಸಿಎಂಆರ್ ಗೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಐಸಿಎಂಆರ್ ನ ಹಿರಿಯ ವಿಜ್ಞಾನಿ ಡಾ| ರಾಮನ್ ಗಂಗಾಖೇಡ್ಕರ್ ಕೋವಿಡ್-19 ಹೊಸ ಕಾಯಿಲೆಯಾಗಿದ್ದು, ವಿಜ್ಞಾನಿಗಳು ಕಳೆದ ಮೂರುವರೆ ತಿಂಗಳಲ್ಲಿ ಪಿಸಿಆರ್ ಕಿಟ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ ಪರೀಕ್ಷಾ ಕಿಟ್ ಗಳು ದೋಷಪೂರಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ದಯವಿಟ್ಟು ಯಾರೂ ರ‍್ಯಾಪಿಡ್ ಟೆಸ್ಟ್ ಕಿಟ್ ಮತ್ತು ಆರ್ ಟಿ-ಪಿಸಿಆರ್ ಕಿಟ್ ಗಳನ್ನು ಬಳಸಬೇಡಿ. ಆರೋಗ್ಯ ಸಚಿವಾಲಯದ ತಜ್ಞರು ಇನ್ನೆರಡು ದಿನಗಳಲ್ಲಿ ಕಿಟ್ ಗಳನ್ನು ಪರಿಶೀಲಿಸಿ ವರದಿ ನೀಡಲಿದ್ದು, ಆ ಬಳಿಕ ಸಚಿವಾಲಯವೇ ಮುಂದಿನ ನಿರ್ಧಾರ ಪ್ರಕಟಿಸಲಿದೆ ಎಂದಿದ್ದಾರೆ.
ಪರೀಕ್ಷಾ ಕಿಟ್ ಗಳನ್ನು ದೆಹಲಿಯಿಂದ ವಿವಿಧ ರಾಜ್ಯಗಳಿಗೆ ಕಳುಹಿಸುವ ಮೊದಲು ಪರಿಶೀಲಿಸಿದಾಗ ಶೇಕಡಾ 71ರಷ್ಟಿದ್ದ ಫಲಿತಾಂಶದ ನಿಖರತೆ ಈಗ ಶೇಕಡಾ 6ರಿಂದ ಶೇಕಡಾ 71ರ ವ್ಯಾಪ್ತಿಯಲ್ಲಿದೆ. ಇಷ್ಟೊಂದು ವ್ಯತ್ಯಾಸ ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ.
ರಾಜಸ್ಥಾನದಲ್ಲಿ ಕೋವಿಡ್-19 ದೃಢಪಟ್ಟಿದ್ದ ಸೋಂಕಿತರನ್ನು ಈ ಪರೀಕ್ಷಾ ಕಿಟ್ ಗಳ ಮೂಲಕ ತಪಾಸಣೆ ಮಾಡಿದಾಗ ನೆಗೆಟಿವ್ ಎಂದು ವರದಿ ಬಂದಿದ್ದು, ಶೇಕಡಾ 90ರಷ್ಟು ನಿಖರತೆಯನ್ನು ನಿರೀಕ್ಷಿಸಲಾಗಿದ್ದ ಪರೀಕ್ಷಾ ಫಲಿತಾಂಶದಲ್ಲಿ ಕೇವಲ ಶೇಕಡಾ 5.4 ರಷ್ಟು ಮಾತ್ರ ನಿಖರ ಫಲಿತಾಂಶ ಬಂದಿತ್ತು. ಈ ಹಿನ್ನೆಲೆಯಲ್ಲಿ ರ‍್ಯಾಪಿಡ್ ಟೆಸ್ಟ್ ಕಿಟ್ ಮತ್ತು ಆರ್ ಟಿ-ಪಿಸಿಆರ್ ಕಿಟ್ ಗಳ ಬಳಕೆ ನಿಲ್ಲಿಸಲಾಗಿದೆ ಎಂದು ರಾಜಸ್ಥಾನದ ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ.
ಚೀನಾ ನಿರ್ಮಿತ ರ‍್ಯಾಪಿಡ್ ಟೆಸ್ಟ್ ಕಿಟ್ ಮತ್ತು ಆರ್ ಟಿ-ಪಿಸಿಆರ್ ಕಿಟ್ ಗಳು ದೋಷಪೂರಿತವಾಗಿದೆ ಎಂದು ಈಗಾಗಲೇ ಬ್ರಿಟನ್, ಸ್ಪೇನ್, ಟರ್ಕಿ, ಸ್ಲೊವಾಕಿಯಾ, ಜೆಕ್ ರಿಪಬ್ಲಿಕ್ ಸೇರಿದಂತೆ ಹಲವು ರಾಷ್ಟ್ರ ಗಳು ದೂರಿದ್ದು, ಕಳಪೆ ಪರೀಕ್ಷಾ ಕಿಟ್ ಅಮದು ಮಾಡಿರುವ ಚೀನಾದಿಂದ ಅಂತರ ಕಾಯ್ದುಕೊಂಡಿದೆ.
. ಸ್ಪೇನ್ ದೋಷಪೂರಿತ ಪರೀಕ್ಷಾ ಕಿಟ್ ಗಳನ್ನು ಪೂರೈಸಿದ ಚೀನಾದ ಕಂಪನಿಗಳ ಜೊತೆಗಿನ ಖರೀದಿಯನ್ನು ರದ್ದುಗೊಳಿಸಿದೆ.
. 35 ಲಕ್ಷ ಮೌಲ್ಯದ ಕೊರೊನಾ ತಪಾಸಣಾ ಕಿಟ್ ಗಳನ್ನು ಬ್ರಿಟನ್ ಚೀನಾದಿಂದ ಖರೀದಿಸಿದ್ದು, ಅವುಗಳು ದೋಷಪೂರಿತವಾಗಿದೆ.
. ಚೀನಾದ ಪರೀಕ್ಷಾ ಕಿಟ್ ಗಳ ವರದಿಯ ನಿಖರತೆಯಲ್ಲಿ ಕಡಿಮೆ ನಿಖರ ಫಲಿತಾಂಶವೆಂಬ ಹಿನ್ನೆಲೆಯಲ್ಲಿ ಮಲೇಷ್ಯಾ ದಕ್ಷಿಣ ಕೊರಿಯಾದಿಂದ ಪರಿಕರಗಳನ್ನು ಅಮದು ಮಾಡಿಕೊಳ್ಳಲು ಮುಂದಾಗಿದೆ.
. ಚೀನಾದ ಆರು ಲಕ್ಷ ಫೇಸ್ ಮಾಸ್ಕ್ ಗಳನ್ನು ನೆದರ್‌ಲ್ಯಾಂಡ್ಸ್ ಅಸಮರ್ಪಕ ಫಿಲ್ಟರ್ ಮತ್ತು ಸರಿಯಾಗಿ ಹೊಂದುತ್ತಿಲ್ಲ ಎಂಬ ಕಾರಣ ನೀಡಿ ಕಳೆದ ವಾರ ಹಿಂತಿರುಗಿಸಿದೆ.
. ಚೀನಾದಿಂದ ಅಮದಾದ ವೈದ್ಯಕೀಯ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಪರೀಕ್ಷಿಸಿದ ನಂತರ ಈ ಸಾಧನಗಳು ಆಸ್ಪತ್ರೆಯ ಬಳಕೆಗೆ ಹೊಂದಿಕೊಳ್ಳುತ್ತಿಲ್ಲ ಎಂದು ಫಿನ್ಲೆಂಡ್ ತಿಳಿಸಿದೆ.
. ಕೊರೋನಾದ ಗಂಭೀರತೆ ಮುಚ್ಚಿಟ್ಟ ಹಿನ್ನೆಲೆಯಲ್ಲಿ ಚೀನಾದ ಮೇಲೆ ಕೆಂಡಾಮಂಡಲವಾಗಿರುವ ಅಮೆರಿಕ ಮತ್ತೊಮ್ಮೆ ಕಿಡಿಕಾರಿದ್ದು, ವೈದ್ಯರಿಗೆ ಅಗತ್ಯವಾದ ರಕ್ಷಣಾ ಸಾಧನಗಳು ಮತ್ತು ಮಾಸ್ಕ್ ಗಳನ್ನು ಚೀನಾ ಕಳ್ಳ ದಾಸ್ತಾನು ಮಾಡಿಟ್ಟಿದ್ದು, ಈ ಸಂದರ್ಭದಲ್ಲಿ ಅತ್ಯಧಿಕ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದೆ.








