
ಕೊರೋನಾ ಮಹಾಮಾರಿಯ ಕೇಂದ್ರ ಚೀನಾ, ಆರಂಭದಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಹೊರಜಗತ್ತಿಗೆ ಮುಚ್ಚಿಟ್ಟ ಕಾರಣದಿಂದ ಇಂದು ವಿಶ್ವವೇ ಕೊರೊನಾದಿಂದ ತಲ್ಲಣಗೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಮುಂದುವರಿದ ರಾಷ್ಟ್ರಗಳು ಕೂಡ ಕೊರೊನಾ ಸೋಂಕಿನ ಮುಂದೆ ಏನೂ ಮಾಡಲಾಗದೆ ಅಸಹಾಯಕರಾಗಿದ್ದಾರೆ. ಕೊರೋನಾದಿಂದ ಅತಿ ಹೆಚ್ಚಿನ ತೊಂದರೆಗೊಳಗಾದ ರಾಷ್ಟ್ರ, ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕ. ಇಲ್ಲಿಯವರೆಗೆ ಏಳೂವರೆ ಲಕ್ಷಕ್ಕೂ ಹೆಚ್ಚಿನ ಸೋಂಕಿತರು ಅಮೆರಿಕದಲ್ಲಿ ಪತ್ತೆಯಾಗಿದ್ದರೆ, 40 ಸಾವಿರಕ್ಕೂ ಅಧಿಕ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ವಿಶ್ವದಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಜಾಗತಿಕ ಅರ್ಥಿಕತೆಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಬಹಳಷ್ಟು ಸಮಯ ಹಿಡಿಯಬಹುದು ಎಂದು ಹೇಳಲಾಗುತ್ತಿದೆ.
ಇದರ ನಡುವೆ ಜಗತ್ತಿಗೆ ಕೊರೊನಾ ಹಬ್ಬಿಸಿರುವ ಚೀನಾ, ತನ್ನ ಅರ್ಥಿಕತೆಗೆ ಚಾಲನೆ ನೀಡಿದ್ದು, ನಂಬರ್ 1 ರಾಷ್ಟ್ರವಾಗುವತ್ತ ದೃಷ್ಟಿ ನೆಟ್ಟಿದೆಯೇ ಎಂಬ ಸಂಶಯ ಕಾಡುತ್ತಿದೆ.
ವಿಶ್ವವೇ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಚೀನಾ ಕೊರೊನಾ ಬಾಧೆಗೆ ಒಳಗಾದ ರಾಷ್ಟ್ರಗಳಿಗೆ ಔಷಧ, ಮಾಸ್ಕ್, ವೆಂಟಿಲೇಟರ್, ಟೆಸ್ಟ್ ಕಿಟ್ ಮುಂತಾದ ಕೊರೊನಾ ಚಿಕಿತ್ಸಾ ಪರಿಕರಗಳನ್ನು ರವಾನಿಸುವ ಕಾರ್ಯದಲ್ಲಿ ಮಗ್ನವಾಗಿದೆ. ಅದರಲ್ಲೂ ತನ್ನ ನರಿ ಬುದ್ಧಿ ತೋರಿಸಿರುವ ಚೀನಾ ಕಳಪೆ ವೈದ್ಯಕೀಯ ಪರಿಕರಗಳನ್ನು ಪೂರೈಸಿ ಟೀಕೆಗೆ ಒಳಗಾಯಿತು. ಚೀನಾದ ಈ ಕುತಂತ್ರ ಬುದ್ಧಿಯಿಂದಾಗಿ ಜಗತ್ತಿಗೆ ಚೀನಾವೆಂದರೆ ಅನುಮಾನ, ಭಯ ಮತ್ತು ಆತಂಕ. ಅಮೆರಿಕದ ಮಯಾಮಿಯಲ್ಲಿರುವ ಬರ್ಮಿನ್ ಲಾ ಗ್ರೂಪ್ ಕೊರೋನಾದಿಂದ ಜಗತ್ತು ತತ್ತರಿಸಲು ಚೀನಾವೇ ಕಾರಣ ಎಂದು ದಾವೆ ಹೂಡಿದೆ. ಇಸ್ರೇಲ್ ನ ಒಂದು ಎನ್.ಜಿ.ಒ ಕೂಡ ಚೀನಾ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದೆ. ಈಗಾಗಲೇ ಬ್ರಿಟನ್, ಫ್ರಾನ್ಸ್ ಸಹಿತ ಹಲವಾರು ದೇಶಗಳು ಚೀನಾದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರೆ, ಜಪಾನ್ ದಕ್ಷಿಣ ಕೊರಿಯ ಚೀನಾದಲ್ಲಿನ ತಮ್ಮ ಶಾಖೆಗಳನ್ನು ಸ್ಥಳಾಂತರಿಸಲು ಮುಂದಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿಯೇ ಚೀನಾದ ಮೇಲೆ ತಿರುಗಿ ಬಿದ್ದಿದ್ದು, ಚೀನಾ ಗೊತ್ತಿದ್ದು ಕೊರೊನಾ ಹರಡುವಿಕೆಯನ್ನು ಮುಚ್ಚಿಟ್ಟಿದ್ದರೆ, ತಪ್ಪಿಗೆ ತಕ್ಕ ಶಾಸ್ತಿಯನ್ನು ಅನುಭವಿಸಿಯೇ ತೀರಬೇಕು ಎಂದು ಹೇಳಿದ್ದಾರೆ. ಚೀನಾದ ಆರಂಭಿಕ ತಪ್ಪುಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಕಡೆಗಣಿಸಿತು ಎಂದು ಆರೋಪಿಸಿರುವ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡುತ್ತಿದ್ದ ಅರ್ಥಿಕ ನೆರವನ್ನು ನಿಲ್ಲಿಸಿದ್ದಾರೆ.
ಚೀನಾ ಕಳೆದ ಐದು ವರ್ಷಗಳಿಂದ ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ವಿಶ್ವ ಸಂಸ್ಥೆಯ ವಿವಿಧ ಅಂಗಗಳಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡು, ತನಗೆ ಬೇಕಾದ ರೀತಿಯಲ್ಲಿ ನೀತಿ ನಿಯಮಗಳನ್ನು ರೂಪಿಸಿಕೊಂಡು ಬಂದಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ, ಆಹಾರ ಮತ್ತು ಕೃಷಿ ಸಂಸ್ಥೆ, ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ, ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಸೇರಿದಂತೆ ಸುಮಾರು 15ಕ್ಕೂ ಹೆಚ್ಚಿನ ಏಜೆನ್ಸಿಗಳಲ್ಲಿ ಚೀನಾದ ನಾಯಕತ್ವವಿದ್ದು, ಟ್ರಂಪ್ ಆರೋಪವನ್ನು ಅಲ್ಲಗಳೆಯುವಂತಿಲ್ಲ ಎಂದೆನಿಸುತ್ತದೆ. ಪ್ರಸ್ತುತ ಸನ್ನಿವೇಶದ ಆಗುಹೋಗುಗಳನ್ನು ನೋಡುವಾಗ ಜಗತ್ತಿನ ಮೇಲೆ ಪ್ರಭಾವ ಬೀರಲು ವರ್ಷಗಳಿಂದ ತಯಾರಿ ನಡೆಸಿರುವಂತೆ ಕಾಣುತ್ತಿರುವ ಚೀನಾ ನಂಬರ್ 1 ರಾಷ್ಟ್ರವಾಗಲು ಹೊರಟಿದೆಯೇ ಎಂಬ ಸಂಶಯ ಕಾಡುತ್ತಿದೆ.








