ಯಾದಗಿರಿ: ನಗರ ಠಾಣೆ ಪಿಎಸ್‌ಐ ಪರಶುರಾಮ್ ಸಾವಿನ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತುಕೊಂಡಿರುವ ಸಿಐಡಿ ತನಿಖಾ ತಂಡ (CID Investigation Team) ಯಾದಗಿರಿಗೆ ಭೇಟಿ ನೀಡಿದೆ.
ಪಿಎಸ್ ಐ ಪರಶುರಾಮ್ ಸಾವು ಪ್ರರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Channa Reddy Patel) ಮತ್ತು ಅವರ ಪುತ್ರ ಪಂಪಣ್ಣಗೌಡ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿತ್ತು. ಸರ್ಕಾರ ಆದೇಶಿಸಿದ ಮರುದಿನವೇ ಡಿವೈಎಸ್‌ಪಿ (DYSP) ಪುನೀತ ನೇತೃತ್ವದ ಸಿಐಡಿ ತನಿಖಾ ತಂಡ ಯಾದಗಿರಿಗೆ (Yadagiri) ಭೇಟಿ ನೀಡಿದೆ.
ಯಾದಗಿರಿ ನಗರ ಪೊಲೀಸ್ ಠಾಣೆಗೆ (Yadagiri City Police Station) ಭೇಟಿ ನೀಡಿದ್ದ ಸಿಐಡಿ ತಂಡ ಈಗಾಗಲೇ ಡಿವೈಎಸ್ಪಿ ಕಚೇರಿಯಲ್ಲಿ ಕೇಸ್‌ಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದೆ. ಅಲ್ಲದೇ, ತನಿಖೆ ಚುರುಕುಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿ ಮೂಲಗಳು ಹೇಳಿವೆ.
ಪರಶುರಾಮ್ ನಿಗೂಢ ಸಾವು ಪ್ರಕರಣದಲ್ಲಿ ಶಾಸಕ ಚೆನ್ನಾರೆಡ್ಡಿ ಹಾಗು ಪುತ್ರ ಪಂಪನಗೌಡ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಿಂದಾಗಿ ಶಾಸಕ ಚೆನ್ನಾರೆಡ್ಡಿ ಹಾಗೂ ಮಗ ಪಂಪನಗೌಡ ಫೋನ್ ಸ್ವೀಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಒಂದು ವರ್ಷದ ಹಿಂದೆ ಯಾದಗಿರಿ ನಗರದ ಪಿಎಸ್ ಐ ಆಗಿ ಪರಶುರಾಮ್ (35) ಅಧಿಕಾರ ಸ್ವೀಕರಿಸಿದ್ದರು. ಆದರೆ, ಅವರನ್ನ ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಕಾರಣ ಗುರುವಾರ ಠಾಣೆಯ ಸಿಬ್ಬಂದಿ ಬೀಳ್ಕೊಟ್ಟಿದ್ದರು. ಶುಕ್ರವಾರ (ಆ.2) ರಾತ್ರಿ 8 ಗಂಟೆಯ ವೇಳೆಗೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಾಸಕ ಹಾಗೂ ಅವರ ಮಗ ಇದೇ ಠಾಣೆಯಲ್ಲಿ ಮುಂದುವರೆಸಲು 30 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಇದರಿಂದ ಆತಂಕಗೊಂಡು ಅವರಿಗೆ ಹೃದಯಾಘಾತವಾಗಿದೆ ಎದು ಕುಟುಂಬಸ್ಥರು ಆರೋಪಿಸಿದ್ದರು. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.