ಕಲಬುರಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನದಂದು ಡಿಜೆ ವಿಷಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಯ ಅಶೋಕ್ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಜನ್ಮ ದಿನದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಮೂರ್ತಿಯ ಮೆರವಣಿಗೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಲವಾರು ಜನರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ 21 ವರ್ಷದ ಆಕಾಶ್ ಮತ್ತು ನವೀನ್ ಎಂಬಾತನ ಮಧ್ಯೆ ಮೆರವಣಿಗೆಯಲ್ಲಿ ಡಿಜೆ ಮೇಲೆ ಕುಳಿತುಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿತ್ತು.
ನಂತರ ಅಲ್ಲಿಂದ ಹೋಗಿದ್ದ ನವೀನ್, ಚಾಕುವಿನೊಂದಿಗೆ ಜೇವರ್ಗಿ ಕ್ರಾಸ್ ಬಳಿ ಬಂದಿದ್ದಾನೆ. ಬಂದಿದ್ದೆ ತಡ ಏಕಾಏಕಿ ಆಕಾಶ್‌ಜಿಗೆ ಚಾಕುವಿನಿಂದ ಮನಬಂದಂತೆ ದೇಹದ ತುಂಬೆಲ್ಲ ಚುಚ್ಚಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್, ಆದರ್ಶ್ ಹಾಗೂ ಅಂಬರೀಶ್ ಸೇರಿದಂತೆ ಮೂವರನ್ನ ಬಂಧಿಸಲಾಗಿದೆ.
ಕೊಲೆ ಮಾಡಿದ ನವೀನ್ ಮತ್ತು ಕೊಲೆಯಾದ ಆಕಾಶ್ ಒಂದೇ ಬಡಾವಣೆಯ ನಿವಾಸಿಗಳು ಮತ್ತು ಸ್ನೇಹಿತರು ಎನ್ನಲಾಗಿದೆ. ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.