Climate Change – ಅಂಟಾರ್ಕ್ಟಿಕಾದಲ್ಲಿ ಕರಗಿದೆ 12 ಟ್ರಿಲಿಯನ್ ಟನ್ ಐಸ್
ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನ ಮೂಲೆ ಮೂಲೆಯೂ ಪ್ರಭಾವಕ್ಕೆ ಒಳಗಾಗುತ್ತಿದೆ. ಇತ್ತೀಚೆಗೆ, ವಿಜ್ಞಾನಿಗಳು ಅಂಟಾರ್ಕ್ಟಿಕಾದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅಧ್ಯಯನ ಮಾಡಿದ್ದು, 1997 ರಿಂದ ಇಲ್ಲಿಯವರೆಗೆ ಈ ಪ್ರದೇಶದಲ್ಲಿ 12 ಟ್ರಿಲಿಯನ್ ಟನ್ ಐಸ್ ಕರಗಿದೆ ಎಂದು ಹೇಳಿದ್ದಾರೆ. ಹಿಂದೆ ಅಂದಾಜಿಸಿದ್ದಕ್ಕಿಂತ ದುಪ್ಪಟ್ಟು ಕರಗುತ್ತಿದೆ. ಮಂಜುಗಡ್ಡೆ ಕರಗುವಿಕೆಯಿಂದ ಸಮುದ್ರ ಮಟ್ಟ ಹೆಚ್ಚಾಗುತ್ತದೆ. ಅಲ್ಲದೆ ಇದು ಇಡೀ ಪ್ರಪಂಚದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಅರ್ಥ್ ಸಿಸ್ಟಮ್ ಸೈನ್ಸ್ ಡೇಟಾ ಜರ್ನಲ್ನಲ್ಲಿ ಈ ಸಂಶೋಧನೆ ಪ್ರಕಟಗೊಂಡಿದೆ. ದೀರ್ಘಾವಧಿಯ ಹವಾಮಾನ ಬದಲಾವಣೆ ಅಂಟಾರ್ಕ್ಟಿಕ್ ಮಂಜುಗಡ್ಡೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
25 ವರ್ಷಗಳಲ್ಲಿ ಬದಲಾದ ಅಂಟಾರ್ಕ್ಟಿಕಾ ಕರಾವಳಿ
ಅಂಟಾರ್ಕ್ಟಿಕಾದಲ್ಲಿ ಮಂಜು ಕರಗುವ ಪ್ರಕ್ರಿಯೆ ಖಂಡದ ಹೊರ ಭಾಗದಿಂದ ಒಳಭಾಗಕ್ಕೆ ಹರಡಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ, ಅಂಟಾರ್ಕ್ಟಿಕಾದ ಪಶ್ಚಿಮ ಭಾಗದ ಪ್ರದೇಶಗಳಲ್ಲಿ ಮಂಜುಗಡ್ಡೆಯ ಕರಗುವಿಕೆ ದ್ವಿಗುಣಗೊಂಡಿದೆ. ಇದರೊಂದಿಗೆ ಕಳೆದ 25 ವರ್ಷಗಳಲ್ಲಿ ಅಂಟಾರ್ಟಿಕಾದ ಕರಾವಳಿಯೂ ಬದಲಾಗಿದೆ.
ವೇಗವಾಗಿ ಕರಗುತ್ತಿರುವ ಐಸ್ ಶೀಟ್
ಪ್ರತಿ ವರ್ಷ, ಅಂಟಾರ್ಕ್ಟಿಕ್ ಖಂಡದಲ್ಲಿ 2,000 ಘನ ಕಿಲೋಮೀಟರ್ಗಳಷ್ಟು ಮಂಜುಗಡ್ಡೆ ಬೆಳೆಯುತ್ತದೆ ಮತ್ತು ಅದೇ ಪ್ರಮಾಣದ ಮಂಜುಗಡ್ಡೆ ಕರಗಿ ಸಾಗರಕ್ಕೆ ಹರಿಯುತ್ತದೆ. ಇದು ಸಮತೋಲನವನ್ನು ಸೃಷ್ಟಿಸುತ್ತದೆ. ಆದರೆ ಹವಮಾನ ವೈಪರಿತ್ಯದಿಂದಾಗಿ ಐಸ್ ವೇಗವಾಗಿ ಕರಗುತ್ತಿದೆ ಎಂಬುದನ್ನ ಅಧ್ಯಯನಗಳು ಸೂಚಿಸುತ್ತಿವೆ.
ನೇಚರ್ ಜರ್ನಲ್ನಲ್ಲಿ ಪ್ರಕಟವಾದ ಮತ್ತೊಂದು ಸಂಶೋಧನೆಯಲ್ಲಿ, ಸಾಗರದ ಉಷ್ಣತೆಯಿಂದಾಗಿ ಅಂಟಾರ್ಕ್ಟಿಕಾದ ಮಂಜುಗಡ್ಡೆಯು ಕಡಿಮೆಯಾಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದು ಅಧ್ಯಯನದ ಪ್ರಕಾರ ಅಂಟಾರ್ಕ್ಟಿಕಾವು ಇನ್ನು ಮುಂದೆ ತನ್ನ 2000 ರ ಹಿಂದಿನ ಸ್ಥಿತಿಗೆ ಮರಳಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ.