ದೆಹಲಿಯಿಂದಲೇ ವಿರೋಧಿ ಪಾಳಯಕ್ಕೆ ರಾಜಾಹುಲಿ ಖಡಕ್ ಸಂದೇಶ
ದೆಹಲಿ : ಸದ್ಯ ದೆಹಲಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಲ್ಲಿಂದಲೇ ತಮ್ಮ ಸ್ವಪಕ್ಷೀಯ ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಆ ಮೂಲಕ ನಾಯಕತ್ವ ಬದಲಾವಣೆ ವಿಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಂಪ್ಲೀಟ್ ಫುಲ್ ಸ್ಟಾಪ್ ಇಟ್ಟಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಯತ್ತ ಪ್ರಯಾಣ ಬೆಳೆಸುತ್ತಿದ್ದಂತೆ ರಾಜ್ಯದಲ್ಲಿ ಸಾಕಷ್ಟು ಊಹಾಪೋಹಗಳ ಜೊತೆಗೆ ಒಂದಿಷ್ಟು ಕುತೂಹಲಗಳು ಗರಿಗೆದರಿದ್ದವು. ಇತ್ತ ರಾಜ್ಯ ಬಿಜೆಪಿಯಲ್ಲಿ ಹೊಗೆಯಾಡುತ್ತಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೂ ಜೀವಬಂದಿತ್ತು.
ಆದ್ರೆ ಪಕ್ಷದ ವರಿಷ್ಠರನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದು ಕಡ್ಡಿತುಂಡಾಗುವ ರೀತಿಯಲ್ಲಿ ಹೇಳಿದ್ದಾರೆ.
ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಯಡಿಯೂರಪ್ಪ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಶುದ್ಧ ಸುಳ್ಳು ಎಂದು ಘಂಟಾಘೋಷವಾಗಿ ಹೇಳಿದ್ದಾರೆ.
ಆ ಮೂಲಕ ನಾಯಕತ್ವ ಬದಲಾವಣೆಯಾಗುತ್ತೆ ಅಂತಾ ಬಹಿರಂಗ ಹೇಳಿಕೆ ಕೊಡುತ್ತಿದ್ದ, ಪ್ರಮಾಣವಚನಕ್ಕೆ ಸೂಟು ಸಿದ್ಧಪಡಿಸಿಕೊಂಡಿದ್ದವರಿಗೆ ಕೂಲ್ ಆಗಿಯೇ ಖಡಕ್ ಸಂದೇಶ ರವಾನಿಸಿದ್ದಾರೆ.