Basavaraja Bommai | ಮೇಕೆದಾಟು ಯೋಜನೆ : ನೆರೆ ರಾಜ್ಯದ ವಿರುದ್ಧ ಕಿಡಿಕಾರಿದ ಸಿಎಂ
ಮೇಕೆದಾಟು ಯೋಜನೆ ತಮಿಳುನಾಡಿಗೆ ರಾಜಕೀಯ ದಾಳ
ತಮಿಳುನಾಡು ವಿರುದ್ಧ ಮುಖ್ಯಮಂತ್ರಿ ಬೊಮ್ಮಾಯಿ ಆಕ್ರೋಶ
ತಮಿಳುನಾಡು ವಿಧಾನಸಭೆ ನಿರ್ಣಯಕ್ಕೆ ಕಾನೂನಿನ ಬೆಲೆ ಇಲ್ಲ
ಸ್ವಾತಂತ್ರ್ಯ ದೊರೆತಾಗಿನಿಂದ ಕಾವೇರಿ ಹೆಸರಲ್ಲಿ ರಾಜಕಾರಣ
ಬೆಂಗಳೂರು : ಮೇಕೆದಾಟು ವಿಚಾರವಾಗಿ ತಮಿಳುನಾಡು ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ.
ಇದಕ್ಕೆ ಸೆಡ್ಡು ಹೊಡೆದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿರುದ್ಧ ಕೈಗೊಳ್ಳಲಾಗಿರುವ ನಿರ್ಣಯ ಕಾನೂನು ಬಾಹಿರವಾಗಿದೆ.
ಒಂದು ರಾಜ್ಯ ಇನ್ನೊಂದು ರಾಜ್ಯದ ಹಕ್ಕನ್ನು ಆಕ್ರಮಿಸಿಕೊಳ್ಳುವಂತಹ ಜನ ವಿರೋಧಿ ನಿರ್ಣಯವಾಗಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ನಂಬಿಕೆ ಇಲ್ಲದ ನಿರ್ಣಯ ಇದಾಗಿದೆ. ತಮಿಳುನಾಡು ವಿಧಾನಸಭೆ ನಿರ್ಣಯಕ್ಕೆ ಯಾವುದೇ ಕಾನೂನಿನ ಬೆಲೆ ಇಲ್ಲ ಎಂದು ಖಂಡಿಸಿದ್ದಾರೆ.
ಸ್ವಾತಂತ್ರ್ಯ ದೊರೆತಾಗಿನಿಂದಲೂ ಕಾವೇರಿ ಹೆಸರಲ್ಲಿ ತಮಿಳುನಾಡು ರಾಜಕೀಯ ಮಾಡುತ್ತಿದೆ.
ಇದೀಗ ಮೇಕೆದಾಟು ಯೋಜನೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ. ಕಾವೇರಿ ಜಲವಿವಾದ ನ್ಯಾಯಮಂಡಲಿ ತೀರ್ಪು ನೀಡಿ ನೀರಿನ ಹಂಚಿಕೆಯಾಗಿದೆ.
ನೀರನ್ನು ನೀಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇದೆ. ನಮ್ಮ ರಾಜ್ಯದಲ್ಲಿ ಹುಟ್ಟಿರುವ ಕಾವೇರಿ, ಇಲ್ಲಿ ಬಿದ್ದ ಮಳೆಯ ಆಧಾರದ ಮೇಲೆ ನಾವು ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಯನ್ನು ರೂಪಿಸಿದ್ದೇವೆ.
ಇಷ್ಟೆಲ್ಲಾ ಇದ್ದರೂ ತಮಿಳುನಾಡಿನವರು ತಕರಾರು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
CM Bommai gives statement on Tamil Nadu Assembly resolution