ಮಾರ್ಚ್ 6ರಂದು ಮಂಡಿಸಲಿರುವ ತಮ್ಮ ದಾಖಲೆಯ 17ನೇ ಬಜೆಟ್‌ಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ತಯಾರಿಯಲ್ಲಿ ನಿರತರಾಗಿದ್ದಾರೆ. ಬಜೆಟ್‌ಗೆ ಮುನ್ನ ಎಲ್ಲ ಇಲಾಖೆಗಳ ಅಗತ್ಯತೆಗಳನ್ನು ಸಮಗ್ರವಾಗಿ ಅರಿಯುವ ಉದ್ದೇಶದಿಂದ ಮುಖ್ಯಮಂತ್ರಿ ಇಂದು ಮಹತ್ವದ ಬಜೆಟ್ ಪೂರ್ವಭಾವಿ ಸಭೆ ನಡೆಸಿದರು.
ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳ ಸಚಿವರು ಮತ್ತು ಉನ್ನತಾಧಿಕಾರಿಗಳು ಭಾಗವಹಿಸಿದ್ದರು. ಮುಂದಿನ ಆರ್ಥಿಕ ವರ್ಷದಲ್ಲಿ ಇಲಾಖೆಗಳ ಮೂಲಕ ಜಾರಿಗೆ ತರಲಿರುವ ಹೊಸ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳು ಹಾಗೂ ಅನುದಾನದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ವಿವರವಾದ ಮಾಹಿತಿ ಪಡೆದುಕೊಂಡರು.
ಇದಲ್ಲದೆ, ಸರ್ಕಾರದ ಆದ್ಯತೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಬಗ್ಗೆ, ಬಜೆಟ್‌ನಲ್ಲಿ ಯಾವ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಚರ್ಚಿಸಿದರು. ಜನಪರ, ಅಭಿವೃದ್ಧಿ ಕೇಂದ್ರೀಕೃತ ಬಜೆಟ್ ರೂಪಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವದ ಹೆಜ್ಜೆಯಾಗಿದೆ.
ಮುಂದಿನ ದಿನಗಳಲ್ಲಿ ಇತರ ಪ್ರಮುಖ ಇಲಾಖೆಗಳ ಜೊತೆಯೂ ಇಂತಹ ಪೂರ್ವಭಾವಿ ಸಭೆಗಳು ನಡೆಯಲಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ದಿಕ್ಕು ನೀಡುವ ಬಜೆಟ್ ಮಂಡನೆಗೆ ಸರ್ಕಾರ ಸಜ್ಜಾಗಿದೆ.








