ಮಸೀದಿಯಲ್ಲಿನ ಯೋಜನೆಗಳ ಅಡಿಪಾಯಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಗೆ ಅಹ್ವಾನ – ಮುಸ್ಲಿಂ ಮಂಡಳಿ
ಲಕ್ನೋ, ಅಗಸ್ಟ್ 9: ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ನಿರ್ಮಿಸಲಿರುವ ಮಸೀದಿಯಲ್ಲಿ ವಿವಿಧ ಸಾರ್ವಜನಿಕ ಸೌಲಭ್ಯಗಳಿಗೆ ಅಡಿಪಾಯ ಹಾಕಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲಾಗುವುದು ಎಂದು ರಾಜ್ಯ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ರಚಿಸಿರುವ ಟ್ರಸ್ಟ್‌ನ ಪದಾಧಿಕಾರಿಗಳೊಬ್ಬರು ಶನಿವಾರ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಮಸೀದಿ ನಿರ್ಮಾಣಕ್ಕಾಗಿ ನೀಡಲಾಗಿರುವ ಧನ್ನಿಪುರ ಗ್ರಾಮದ ಐದು ಎಕರೆ ಭೂಮಿಯಲ್ಲಿ, ಸಾರ್ವಜನಿಕರಿಗಾಗಿ ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಅಡಿಗೆ ಮತ್ತು ಸಂಶೋಧನಾ ಕೇಂದ್ರವನ್ನು ಸಹ ನಿರ್ಮಿಸಲಾಗುವುದು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಈ ಯೋಜನೆಗಳಿಗೆ ಅಡಿಪಾಯ ಹಾಕಲು ಆಹ್ವಾನಿಸಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಮತ್ತು ವಕ್ತಾರ – ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) – ಅಥರ್ ಹುಸೇನ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದಲ್ಲದೆ, ಈ ಸಾರ್ವಜನಿಕ ಸೌಲಭ್ಯಗಳ ನಿರ್ಮಾಣಕ್ಕೂ ಸಹಕರಿಸುತ್ತಾರೆ ಎಂದು ಅವರು ಹೇಳಿದರು.

ಮಸೀದಿ ನಿರ್ಮಾಣಕ್ಕೆ ಆದಿತ್ಯನಾಥ್ ಅಡಿಪಾಯ ಹಾಕುತ್ತಾರೆಯೇ ಎಂಬ ಪ್ರಶ್ನೆಗೆ, ಹುಸೇನ್ ಇಸ್ಲಾಂ ಧರ್ಮದ ನಾಲ್ಕು ಚಿಂತನಾ ಶಾಲೆಗಳಾದ ಹನಾಫಿ, ಹನ್ಬಾಲಿ, ಶಫಿ ಮತ್ತು ಮಾಲಿಕಿಯ ಪ್ರಕಾರ ಮಸೀದಿಗೆ ಅಡಿಪಾಯ ಹಾಕುವ ಕ್ರಮವಿಲ್ಲ ಎಂದು ಅವರು ಹೇಳಿದರು.
ಮಸೀದಿಗೆ ಬಾಬರಿ ಮಸೀದಿ ಎಂದು ಹೆಸರಿಸಲಾಗುತ್ತದೆಯೇ ಎಂದು ಕೇಳಿದಾಗ, ಅಂತಹ ಆಲೋಚನೆ ನಾವು ಮಾಡಿಲ್ಲ ಹಾಗು ಹೆಸರನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹುಸೇನ್ ಹೇಳಿದರು.
ಮಸೀದಿ-ಎ-ನಬ್ವಿ (ಸೌದಿ ಅರೇಬಿಯಾದ ಮದೀನಾ) ಮತ್ತು ಇತರ ಕೆಲವು ಮಸೀದಿಗಳನ್ನು ಹೊರತುಪಡಿಸಿ, ಇತರ ಮಸೀದಿಗಳ ಹೆಸರುಗಳು ಅಪ್ರಸ್ತುತವಾಗುತ್ತದೆ. ಅಲ್ಲಾಹನ ದೃಷ್ಟಿಯಲ್ಲಿ, ಮಸೀದಿಗಳಲ್ಲಿ ಮಾಡುವ ಸಜ್ದಾ ಮುಖ್ಯವಾಗಿರುತ್ತದೆ ಮತ್ತು ಇತರ ಸಂಗತಿಗಳು ಅರ್ಥಹೀನವಾಗಿರುತ್ತದೆ ಎಂದು ಅವರು ಹೇಳಿದರು.

ಮಸೀದಿ ನಿರ್ಮಿಸಲು ಉತ್ತರ ಪ್ರದೇಶ ರಾಜ್ಯ ಸುನ್ನಿ ಕೇಂದ್ರ ವಕ್ಫ್ ಮಂಡಳಿಯು ರಚಿಸಿರುವ ಟ್ರಸ್ಟ್ ರಾಜ್ಯ ರಾಜಧಾನಿಯಲ್ಲಿ ಕಚೇರಿ ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದು, ಇದು 10-12 ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.
ಟ್ರಸ್ಟ್ ರಚನೆಯಾಗಿದ್ದು, ನಿಯಮಗಳಿಗೆ ಅನುಸಾರವಾಗಿ ನಾವು ಅದರ ಹೆಸರಿನಲ್ಲಿ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದೇವೆ ಮತ್ತು ಅದರ ವಿತರಣೆಗೆ ಕಾಯುತ್ತಿದ್ದೇವೆ. ಅದರ ನಂತರ ನಾವು ಆನ್‌ಲೈನ್‌ನಲ್ಲಿ ಸಭೆ ನಡೆಸಿ ಬ್ಯಾಂಕ್ ಖಾತೆ ತೆರೆಯುವ ನಿರ್ಣಯವನ್ನು ಅಂಗೀಕರಿಸುತ್ತೇವೆ ಎಂದರು.

ಮಸೀದಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರವು ಧನ್ನಿಪುರದಲ್ಲಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಐಐಸಿಎಫ್ ಮಸೀದಿ, ಇಂಡೋ-ಇಸ್ಲಾಮಿಕ್ ಸಂಶೋಧನಾ ಕೇಂದ್ರ, ಗ್ರಂಥಾಲಯ ಮತ್ತು ಆಸ್ಪತ್ರೆಯ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲಿದೆ.
ಅಯೋಧ್ಯೆ ಜಿಲ್ಲಾಧಿಕಾರಿ ಅನುಜ್ ಕುಮಾರ್ ಝಾ ಅವರು ಔಪಚಾರಿಕವಾಗಿ ಮಸೀದಿಗಾಗಿ ಭೂಮಿಯನ್ನು ಟ್ರಸ್ಟ್ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ನಮಗೆ ಆದಾಯ ದಾಖಲೆಯ ಪ್ರಮಾಣೀಕೃತ ಪ್ರತಿ ಸಿಕ್ಕಿದೆ ಎಂದು ಟ್ರಸ್ಟ್ ಸದಸ್ಯರೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಮಸೀದಿಯ ಉದ್ಘಾಟನೆಗೆ ತಾವು ಹಾಜರಾಗುವುದಿಲ್ಲ ಎಂಬ ಆದಿತ್ಯನಾಥ್ ಅವರ ಹೇಳಿಕೆಗೆ ಅವರು ಕ್ಷಮೆಯಾಚಿಸಬೇಕು ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಒತ್ತಾಯಿಸಿದೆ.








