ಸಹಕಾರಿ ಬ್ಯಾಂಕುಗಳು ಆರ್‌ಬಿಐ ನಿಯಂತ್ರಣಕ್ಕೆ
ಹೊಸದಿಲ್ಲಿ, ಜೂನ್ 25: ಮಹತ್ವದ ಬೆಳವಣಿಗೆಯಲ್ಲಿ ದೇಶದ ಎಲ್ಲಾ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ವ್ಯಾಪ್ತಿಗೆ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. ಇದನ್ನುಇಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಪ್ರಕಟಿಸಿದರು. ದೇಶದಲ್ಲಿ ಒಟ್ಟು “1,482 ನಗರ ಸಹಕಾರಿ ಬ್ಯಾಂಕುಗಳು ಮತ್ತು 58 ಬಹು-ರಾಜ್ಯ ಸಹಕಾರಿ ಬ್ಯಾಂಕುಗಳು ಸೇರಿದಂತೆ ಸರ್ಕಾರಿ ಬ್ಯಾಂಕುಗಳನ್ನು ಈಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮೇಲ್ವಿಚಾರಣಾ ಅಧಿಕಾರಕ್ಕೆ ತರಲಾಗುತ್ತಿದೆ” ಎಂದು ಜಾವಡೇಕರ್ ಇಂದು ಹೇಳಿದ್ದಾರೆ. ಈ ಬ್ಯಾಂಕುಗಳು ಆರ್ಬಿಐ ಮೇಲ್ವಿಚಾರಣೆಯಲ್ಲಿ ಅಧ್ಯಕ್ಷರ ಅನುಮೋದನೆಯ ದಿನಾಂಕದಿಂದ ತಕ್ಷಣವೇ ಜಾರಿಗೆ ಬರಲಿವೆ. ಎಂದು ತಿಳಿಸಿದರು.
ಕಳೆದ ವರ್ಷ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಮ್ಸಿ) ಬ್ಯಾಂಕುಗಳ ವೈಫಲ್ಯದ ನಂತರ, ಕೇಂದ್ರ ಕ್ಯಾಬಿನೆಟ್ ಫೆಬ್ರವರಿಯಲ್ಲಿ ದೇಶದ ಸಹಕಾರಿ ಬ್ಯಾಂಕುಗಳನ್ನು ಬಲಪಡಿಸಲು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿತು. 2020 ರ ಬಜೆಟ್ ಸಂದರ್ಭದಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಹಕಾರಿ ಬ್ಯಾಂಕುಗಳನ್ನು ಆರ್‌ಬಿಐ ವ್ಯಾಪ್ತಿಗೆ ತರಲಾಗುವುದು ಎಂದು ಘೋಷಣೆ ಮಾಡಿದ್ದರು.
ದೇಶಾದ್ಯಂತ 1,500 ಕ್ಕೂ ಹೆಚ್ಚು ನಗರ ಮತ್ತು ಬಹು-ರಾಜ್ಯ ಸಹಕಾರಿ ಬ್ಯಾಂಕುಗಳಲ್ಲಿ 8.6 ಕೋಟಿಗೂ ಹೆಚ್ಚು ಠೇವಣಿದಾರರಿದ್ದಾರೆ. “ಸಹಕಾರಿ ಬ್ಯಾಂಕುಗಳಲ್ಲಿ ಹೂಡಿದ 4.84 ಲಕ್ಷ ಕೋಟಿ ಮೊತ್ತದ ಠೇವಣಿದಾರರ ಹಣ ಸುರಕ್ಷಿತವಾಗಿರುತ್ತದೆ” ಎಂದು ಜಾವಡೇಕರ್ ನಿರ್ಧಾರ ಪ್ರಕಟಿಸುವಾಗ ಹೇಳಿದರು.
ಪ್ರಮುಖವಾಗಿ ಪ್ರಧಾನ್ ಮಂತ್ರಿ ಮುದ್ರ ಯೋಜನೆ (ಪಿಎಂಎಂವೈ) ಯ ‘ಶಿಶು’ ವಿಭಾಗದ ಅಡಿಯಲ್ಲಿ ಸಾಲಗಾರರಿಗೆ 2% ಬಡ್ಡಿ ಸಬ್ವೆನ್ಷನ್ ನೀಡುವುದಾಗಿ ಸರ್ಕಾರ ಘೋಷಿಸಿತು. ಶಿಶು ವರ್ಗದ ಅಡಿಯಲ್ಲಿ, ಫಲಾನುಭವಿಗಳಿಗೆ ₹ 50,000 ವರೆಗಿನ ಮೇಲಾಧಾರ ಮುಕ್ತ ಸಾಲವನ್ನು ನೀಡಲಾಗುವುದು.
ಇದೆ ಮಾರ್ಚ್ 31, 2020 ರಂತೆ ಬಾಕಿ ಉಳಿದ, ಅರ್ಹ ಸಾಲಗಾರರಿಗೆ 12 ತಿಂಗಳ ಅವಧಿಗೆ ಪಿಎಂಎಂವೈ ಅಡಿಯಲ್ಲಿ ಶಿಶು ಸಾಲ ವರ್ಗದ ಸಾಲಗಾರರಿಗೆ 2% ಬಡ್ಡಿ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ, ಎಂದು ಜಾವಡೇಕರ್ ಹೇಳಿದರು.
2015 ರಲ್ಲಿ ಪ್ರಾರಂಭವಾದ ಪ್ರಧಾನ್ ಮಂತ್ರಿ ಮುದ್ರ ಯೋಜನೆ ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ / ಸೂಕ್ಷ್ಮ ಉದ್ಯಮಗಳಿಗೆ 10 ಲಕ್ಷ ವರೆಗೆ ಸಾಲವನ್ನು ನೀಡುತ್ತದೆ. ಈ ಸಾಲಗಳನ್ನು ಪಿಎಂಎಂವೈ ಅಡಿಯಲ್ಲಿ ಮುದ್ರಾ ಸಾಲ ಎಂದು ವರ್ಗೀಕರಿಸಲಾಗಿದೆ. ವಾಣಿಜ್ಯ ಬ್ಯಾಂಕುಗಳು, ಆರ್‌ಆರ್‌ಬಿಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಎಂಎಫ್‌ಐಗಳು ಮತ್ತು ಎನ್‌ಬಿಎಫ್‌ಸಿಗಳು ಮುದ್ರಾ ಸಾಲವನ್ನು ನೀಡುತ್ತವೆ.
ಕೊರೋನವೈರಸ್ ನ ಹಿನ್ನೆಲೆಯಲ್ಲಿ, ಒಬಿಸಿ ಆಯೋಗದ ಅಧಿಕಾರಾವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಡೈರಿ, ಕೋಳಿ ಮತ್ತು ಮಾಂಸ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಖಾಸಗಿ ವಲಯಕ್ಕೆ 3% ವರೆಗಿನ ಬಡ್ಡಿ ಸಬ್ವೆನ್ಷನ್ ಒದಗಿಸಲು ಸರ್ಕಾರವು ₹ 15,000 ಕೋಟಿ ಮೂಲಸೌಕರ್ಯ ನಿಧಿಯನ್ನು ಕ್ಯಾಬಿನೆಟ್ ಅನುಮೋದಿಸಿದೆ. ಅದು ಎಲ್ಲರಿಗೂ ಮುಕ್ತವಾಗಿರುತ್ತದೆ ಮತ್ತು ಇದು ಹಾಲು ಉತ್ಪಾದನೆಯನ್ನು ಹೆಚ್ಚಿಸಲು, ರಫ್ತು ಹೆಚ್ಚಿಸಲು ಮತ್ತು ದೇಶದಲ್ಲಿ 35 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಜಾವಡೇಕರ್ ಹೇಳಿದರು.