ಕೇವಲ 9 ದಿನಗಳಿಗೆ ಆಗುವಷ್ಟಿದೆ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು
ನವದೆಹಲಿ: ಭಾರತೀಯ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಕೇವಲ 9 ದಿನಗಳಿಗೆ ಆಗುವಷ್ಟಿದೆ ಎಂದು ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಶನ್ (ಎಐಪಿಇಎಫ್) ಅಧ್ಯಕ್ಷ ಶೈಲೇಂದ್ರ ದುಬೆ ಹೇಳಿದ್ದಾರೆ.
ಮುಂದುವರೆದು ನಿಯಮಗಳ ಪ್ರಕಾರ, ಪಿಟ್‌ಹೆಡ್‌ಗಳ ಬಳಿ ಇರುವ ಸ್ಥಾವರಗಳು 17 ದಿನಗಳ ದಾಸ್ತಾನು ಹೊಂದಿರಬೇಕು ಮತ್ತು ಕಲ್ಲಿದ್ದಲು ಪಿಟ್‌ಹೆಡ್‌ಗಳಿಂದ ದೂರವಿರುವ ಸ್ಥಾವರಗಳು 26 ದಿನಗಳವರೆಗೆ ಸಂಗ್ರಹ ಹೊಂದಿರಬೇಕು ಎಂದು ತಿಳಿಸಿದ್ದಾರೆ.
ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾದಂತೆ ದೇಶಾದ್ಯಂತ ಉಷ್ಣ ಸ್ಥಾವರಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿವೆ. ಥರ್ಮಲ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಇಲ್ಲದ ಕಾರಣ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಆಮದು ಮಾಡಿಕೊಂಡ ಕಲ್ಲಿದ್ದಲು ಬೆಲೆಯೂ ಹೆಚ್ಚಿದೆ. ಜೊತೆಗೆ ಕಲ್ಲಿದ್ದಲು ಸಾಗಣೆಗೆ ರೈಲ್ವೆ ರೇಕ್‌ಗಳ ಕೊರತೆಯು ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನುಗಳ ಮೇಲೆ ಪರಿಣಾಮ ಬೀರಿದೆ. ದಿನನಿತ್ಯದ 453 ರೇಕ್‌ಗಳ ಬದಲಿಗೆ ಪ್ರಸ್ತುತ 412 ರೇಕ್‌ಗಳು ಮಾತ್ರ ಲಭ್ಯವಿವೆ ಎಂದು ವಿವರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಲ್ಲಿದ್ದಲು ದಾಸ್ತಾನು ಏಳು ದಿನಗಳವರೆಗೆ ಉಳಿದಿದೆ. ಹರಿಯಾಣದಲ್ಲಿ ಕಲ್ಲಿದ್ದಲು ದಾಸ್ತಾನು 8 ಹಾಗೂ ರಾಜಸ್ಥಾನದಲ್ಲಿ 17 ದಿನಗಳವರೆಗೆ ಇದೆ. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್ ಮತ್ತು ಛತ್ತೀಸ್‌ಗಢ ಸೇರಿ ಇತರ ರಾಜ್ಯಗಳು ಸಹ ಕಲ್ಲಿದ್ದಲು ಬಿಕ್ಕಟ್ಟು ಎದುರಿಸುತ್ತಿವೆ.
ಮುಂದಿನ ಕೆಲವು ತಿಂಗಳುಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ, ಆಮದು ಮಾಡಿಕೊಂಡ ಕಲ್ಲಿದ್ದಲಿನ ಬೆಲೆ ಪ್ರತಿ ಟನ್‌ಗೆ 7,613 ರೂ. ನಿಂದ 22,841 ರೂ.ಗೆ ಹೆಚ್ಚಾಗಿದೆ.
ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ, 173 ವಿದ್ಯುತ್ ಸ್ಥಾವರಗಳು (ಆಮದು ಮಾಡಿಕೊಂಡ ಕಲ್ಲಿದ್ದಲು ಬಳಸುವ ಘಟಕಗಳನ್ನೂ ಒಳಗೊಂಡಂತೆ) ಅಗತ್ಯವಿರುವ 66.32 ಮಿಲಿಯನ್ ಟನ್‌ಗಳ ಬದಲಾಗಿ ಕೇವಲ 22.26 ಮಿಲಿಯನ್ ಟನ್‌ಗಳಷ್ಟು ಮಾತ್ರ ದಾಸ್ತಾನು ಹೊಂದಿವೆ.