ಬೆಂಗಳೂರು: ಅನಾರೋಗ್ಯದಿಂದ ನಿನ್ನೆ ನಿಧನರಾದ ಹಾಸ್ಯನಟ ಬುಲೆಟ್ ಪ್ರಕಾಶ್ ಇಂದು ಮಣ್ಣಲ್ಲಿ ಮಣ್ಣಾಗಿದ್ದಾರೆ. ಮಡಿವಾಳ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.
ಇಂದು ಮಧ್ಯಾಹ್ನ 12.50ಕ್ಕೆ ಬೆಂಗಳೂರು ನಗರದ ಹೆಬ್ಬಾಳ ಬಳಿಯ ಚಿರಶಾಂತಿ ಧಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಕೆಲವೇ ಕೆಲವು ಕುಟುಂಬಸ್ಥರಿಗೆ ಮಾತ್ರ ಪಾಲ್ಗೊಳ್ಳಲು ಪೊಲೀಸರು ಅವಕಾಶವನ್ನು ನೀಡಿದ್ದರು. ಬುಲೆಟ್ ಪ್ರಕಾಶ್ ಕುಟುಂಬಸ್ಥರೊಂದಿಗೆ ನಟ ದುನಿಯಾ ವಿಜಯ್ ಕೊನೆಯವರೆಗೂ ಉಪಸ್ಥಿತರಿದ್ದು, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಅಂತ್ಯಕ್ರಿಯೆ ನಡೆಸಲು ಬಿಡದ ಪ್ರೀತಿಯ ನಾಯಿ
ಅಂತ್ಯಸಂಸ್ಕಾರಕ್ಕೂ ಮೊದಲು ಬುಲೆಟ್ ಪ್ರಕಾಶ್ ಅವರ ಪ್ರೀತಿಯ ನಾಯಿ, ಅಂತ್ಯಕ್ರಿಯೆ ನಡೆಸಲು ಬಿಡದೆ, ಪಾರ್ಥಿವ ಶರೀರದ ಮೇಲೇರಿ ಕುಳಿತ ಘಟನೆ ನಡೆಯಿತು. ಬುಲೆಟ್ ಪ್ರಕಾಶ್ ಟೈಸನ್ ಅನ್ನೋ ನಾಯಿಯನ್ನ ಸಾಕಿದ್ದರು. ಒಡೆಯನ ಸಾವಿನಿಂದ ಮಂಕಾಗಿದ್ದ ಟೈಸನ್ ಇಂದು ರುದ್ರಭೂಮಿಗೆ ಪಾರ್ಥಿವ ಶರೀರ ತಂದ ಕೂಡಲೇ ಶವಪೆಟ್ಟಿಗೆ ಮೇಲೇರಿ ಕುಳಿತುಕೊಳ್ತು.








