ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ತಯಾರಿ ಆರಂಭಿಸಿದ್ದು, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಭಾರತದ ಸ್ಪಿನ್ನರ್ಗಳ ನಡುವೆ ತೀವ್ರ ಪೈಪೋಟಿ ಶುರುವಾಗಿದೆ.
ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರರು ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಈ ಎಲ್ಲದರ ಬೆನ್ನಲ್ಲೇ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಲುವಾಗಿ ತಂಡದ ಪ್ರಮುಖ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್ ಅವರುಗಳ ನಡುವೆ ಭಾರೀ ಪೈಪೋಟಿ ಆರಂಭವಾಗಿದ್ದು, ಇವರೊಂದಿಗೆ ಆಲ್ರೌಂಡರ್ಗಳ ಸ್ಥಾನದಲ್ಲಿ ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ಅವರುಗಳು ಸಹ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಉತ್ಸುಕರಾಗಿದ್ದಾರೆ.
ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ಭಾರತ ತಂಡದಲ್ಲಿ ಈ ಐವರು ಸ್ಪಿನ್ನರ್ಗಳಲ್ಲಿ ಯಾರಿಗೆ ವಿಶ್ವಕಪ್ ಟಿಕೆಟ್ ಸಿಗಲಿದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ. ಮೇಲ್ನೋಟಕ್ಕೆ ಆಲ್ರೌಂಡರ್ ಸ್ಥಾನದಲ್ಲಿ ರವೀಂದ್ರ ಜಡೇಜಾಗೆ ವಿಶ್ವಕಪ್ ತಂಡದ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಉಳಿದಂತೆ ಆರ್. ಅಶ್ವಿನ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್ ಹಾಗೂ ಅಕ್ಸರ್ ಪಟೇಲ್ ಅವರುಗಳಲ್ಲಿ ತಂಡದ ಆಯ್ಕೆ ಸಮಿತಿ ಯಾರಿಗೆ ಮಣೆ ಹಾಕಲಿದೆ ಎಂಬುದು ಕೊನೆಯವರೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿಯಲಿದೆ.
ಆದರೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿರುವ ಈ ಐವರು ಪ್ರಮುಖ ಸ್ಪಿನ್ನರ್ಗಳ ಸದ್ಯದ ಪ್ರದರ್ಶನವನ್ನ ಗಮನಿಸಿದರೆ ಕುಲ್ದೀಪ್ ಯಾದವ್ ಹಾಗೂ ಆರ್. ಅಶ್ವಿನ್ ಅವರುಗಳು ಭಾರತದ 18 ಮಂದಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಇವರೊಂದಿಗೆ ಆಲ್ರೌಂಡರ್ಗಳ ಸಾಲಿನಲ್ಲಿ ಅಕ್ಸರ್ ಪಟೇಲ್ ಅವರಿಗೂ ಆಯ್ಕೆ ಸಮಿತಿ ಅವಕಾಶ ನೀಡುವ ನಿರೀಕ್ಷೆ ಇದೆ. ಆದರೆ ಯುಜ್ವೇಂದ್ರ ಚಹಲ್ ಅವರ ಆಯ್ಕೆ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿದೆ. ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿದ್ದ ಚಹಲ್, ಇತ್ತೀಚಿನ ದಿನಗಳಲ್ಲಿ ಮೂರು ಫಾರ್ಮ್ಯಾಟ್ಗಳ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ವಿಶ್ವಕಪ್ ಟೂರ್ನಿಗೆ ಯುಜ್ವೇಂದ್ರ ಚಹಲ್ ಅವರಿಗೆ ತಂಡದಲ್ಲಿ ಸ್ಥಾನ ಸಿಗುವ ಬಗ್ಗೆ ಕುತೂಹಲ ಏರ್ಪಟ್ಟಿದೆ.
ಮತ್ತೊಂದೆಡೆ ತವರಿನಲ್ಲಿ ನಡೆಯುವ ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಈ ಎಲ್ಲಾ ಆಟಗಾರರಿಗೂ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿದ್ದೇ ಆದರೂ, ಅಂತಿಮವಾಗಿ ಪ್ಲೇಯಿಂಗ್ ಇಲವೆನ್ನಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ಸಹ ಕುತೂಹಲ ಮೂಡಿಸಲಿದೆ.