ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯುವುದಕ್ಕಾಗಿ ಎಲ್ಲ ಪಕ್ಷಗಳು ತಂತ್ರ ರೂಪಿಸುತ್ತಿವೆ. ಕರ್ನಾಟಕದಲ್ಲಿ ಜಾರಿಗೊಳಿಸಿ ಯಶಸ್ವಿಯಾದಂತೆ ಈಗ ಲೋಕಸಭೆ ಚುನಾವಣೆಗೂ ಕಾಂಗ್ರೆಸ್ ಗ್ಯಾರಂಟಿ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೀಡುತ್ತಿರುವ ಗ್ಯಾರಂಟಿಗಳಿಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಅಸ್ತ್ರ ಬಿಟ್ಟಿದೆ. ರೈತರು, ಯುವಕರು, ಅಸಂಘಟಿತ ವಲಯದವರು, ಯುವೋದ್ಯಮಿಗಳು ಹೀಗೆ ವಿವಿಧ ವಲಯದ ಜನರನ್ನು ಆಕರ್ಷಿಸುವಂತಹ ಖಾತ್ರಿ ಭರವಸೆಗಳನ್ನು ಕಾಂಗ್ರೆಸ್ ಘೋಷಿಸಿದೆ. ಖಾಲಿ ಉಳಿದಿರುವ 30 ಲಕ್ಷ ಸರ್ಕಾರಿ ನೌಕರಿಗಳನ್ನು ಭರ್ತಿ ಮಾಡುವುದಾಗಿ ದೊಡ್ಡ ಭರವಸೆ ನೀಡಿದ್ದಾರೆ.
ಖಾಲಿ ಇರುವ 30 ಲಕ್ಷ ಸರ್ಕಾರಿ ನೌಕರಿಗಳ ನೇಮಕಾತಿ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ, ಗುತ್ತಿಗೆ ಕೆಲಸಗಾರರಿಗೆ (ಗಿಗ್ ವರ್ಕರ್ಸ್) ಸಾಮಾಜಿಕ ಭದ್ರತೆ, ಸರ್ಕಾರಿ ನೇಮಕಾತಿ ಪರೀಕ್ಷೆಯ, ಪ್ರಶ್ನೆಪತ್ರಿಕೆಯ ಸೋರಿಕೆ ತಡೆಯಲು ಕಠಿಣ ಕಾನೂನು, ಸ್ಟಾರ್ಟಪ್ಗಳಿಗೆ 5,000 ಕೋಟಿ ರೂ ಫಂಡ್ ನಿಯೋಜನೆ ಮಾಡುವ ಗ್ಯಾರಂಟಿ ಘೋಷಿಸಿದೆ.








