ತೈಲ ದರ ಏರಿಕೆ ಖಂಡಿಸಿ ಜು.7 ರಿಂದ ಕಾಂಗ್ರೆಸ್ ಅಭಿಯಾನ
ನವದೆಹಲಿ : ದೇಶದಲ್ಲಿ ಸತತ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಜುಲೈ 7 ರಿಂದ 17ರ ವರೆಗೆ ದೇಶದಾದ್ಯಂತ ಅಭಿಯಾನ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಈ ಬಗ್ಗೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಣದುಬ್ಬರ, ಇಂಧನ ದರ ಏರಿಕೆ, ಧಾನ್ಯಗಳು, ಖಾದ್ಯ ತೈಲ ಮತ್ತು ಅಗತ್ಯವಸ್ತುಗಳ ಬೆಲೆ ಏರಿಕೆ ಸೇರಿದಂತೆ ತುರ್ತು ಆದ್ಯತೆ ನೀಡಬೇಕಿರುವ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮೇ 2ರ ನಂತರ 29 ಬಾರಿ ಇಂಧನ ದರ ಹೆಚ್ಚಿಸಲಾಗಿದೆ. 150ಕ್ಕೂ ಹೆಚ್ಚು ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ 100 ದಾಟಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದ ಮೂಲಕ ಬಿಜೆಪಿ ಸರ್ಕಾರವು ಕಳೆದ ಏಳು ವರ್ಷಗಳಲ್ಲಿ 22 ಲಕ್ಷ ಕೋಟಿ ಗಳಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ, ಉದ್ಯೋಗ ನಷ್ಟ, ವೇತನ ಕಡಿತದಿಂದ ಈಗಾಗಲೇ ಸಂಕಷ್ಟಕ್ಕೀಡಾಗಿರುವ ಜನತೆ ಮತ್ತಷ್ಟು ತೊಂದರೆಗೆ ಒಳಗಾಗಿದೆ.
ಇದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ದೇಶವ್ಯಾಪಿ ಅಭಿಯಾನ ನಡೆಸಲಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.