ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಕೇಳಿಬರುತ್ತಿರುವ ಚರ್ಚೆಗಳ ನಡುವೆ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಹೈಕಮಾಂಡ್ ಅನ್ನು ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯನವರು 5 ವರ್ಷ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಅವರು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರು ಎಷ್ಟು ಬಾರಿ ‘ನಾನು ಐದು ವರ್ಷ ಸಿಎಂ ಆಗಿರುತ್ತೇನೆ’ ಎಂದು ಹೇಳುತ್ತಾರೋ, ಅಷ್ಟೂ ಬಾರಿ ಈ ವಿಚಾರ ಪುನರಾವೃತವಾಗುತ್ತದೆ. ಅವರ ಹೇಳಿಕೆಯಿಂದಲೇ ಅವರ ಮುಂದುವರಿಕೆಯ ಬಗ್ಗೆ ಶಂಕೆ ಮೂಡುತ್ತಿದೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಈ ವಿಚಾರದಲ್ಲಿ ಯಾರು ಮಾತನಾಡಬೇಕೋ ಅವರು ಸುಮ್ಮನೆ ಇದ್ದಾರೆ. ಹೀಗಿರುವಾಗ ರಾಜ್ಯದ ಆಡಳಿತವೇ ಗೊಂದಲಗೊಳಗಾಗುತ್ತದೆ. ಹೈಕಮಾಂಡ್ ಸ್ಪಷ್ಟ ನಿಲುವು ತೆಗೆದುಕೊಳ್ಳದವರೆಗೂ ಈ ರೀತಿಯ ರಾಜಕೀಯ ನಾಟಕ ಮುಂದುವರೆಯುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.







