ದೆಹಲಿಯಲ್ಲಿ ಸರ್ಕಾರವನ್ನು ಭ್ರಷ್ಟಮಾರ್ಗದಲ್ಲಿ ಕೆಡವುವಂಥ ವೈರಸ್ ಇದೆ: ಕೇಂದ್ರದ ವಿರುದ್ಧ ಕಪಿಲ್ ಸಿಬಲ್ ಕಿಡಿ
ನವದೆಹಲಿ : ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನೆಲೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ‘ಜನರಿಂದ ಆಯ್ಕೆಯಾದ ಸರ್ಕಾರವನ್ನು ‘ಭ್ರಷ್ಟ ಮಾರ್ಗ’ದಿಂದ ಕೆಡವುವಂಥ ವೈರಸ್ ದೆಹಲಿಯಲ್ಲಿದೆ. ಇದು ವುಹಾನ್ ವೈರಸ್‌ನಷ್ಟೇ ಅಪಾಯಕಾರಿ. ಇದಕ್ಕಿರುವ ಪ್ರತಿಕಾಯಗಳೆಂದರೆ ಸಂವಿಧಾನದ ಹತ್ತನೇ ವಿಧಿಗೆ ತಿದ್ದುಪಡಿ ಮಾಡುವುದಾಗಿದೆ. ಪಕ್ಷಾಂತರ ನಿಷೇಧ ಕಾನೂನಿಗೆ ತಿದ್ದುಪಡಿ ತಂದು, ಪಕ್ಷಾಂತರಿಗಳು ಐದು ವರ್ಷಗಳ ಕಾಲ ಯಾವುದೇ ಹುದ್ದೆ ಹೊಂದುವುದು ಹಾಗೂ ಮುಂದಿನ ಚುನಾವಣೆ ಎದುರಿಸುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ.
ಮೊತ್ತೊಂದು ಟ್ವೀಟ್ ನಲ್ಲಿ, ತಾನು ಬಿಜೆಪಿ ಸೇರುವುದಿಲ್ಲ ಎಂದು ಸಚಿನ್ ಪೈಲಟ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ, ‘ಅವರ ಘರ್ ವಾಪಸಿ ವಿಚಾರ ಏನಾಯಿತು? ಹರಿಯಾಣದಲ್ಲಿ ಕೇಸರಿ ಪಕ್ಷದ ಕಣ್ಗಾವಲಿನಲ್ಲಿ ಸಚಿನ್ ಬೆಂಬಲಿಗ ಶಾಸಕರು ರಜಾಕಾಲವನ್ನು ಅನುಭವಿಸುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ.








