Congress | ಅನುದಾನದಲ್ಲಿ, ಉದ್ಯೋಗದಲ್ಲಿ ನಿರಂತರ ಅನ್ಯಾಯ
ಬೆಂಗಳೂರು : ಮಾನ್ಯ ಬಸವರಾಜ ಬೊಮ್ಮಾಯಿ ಅವರೇ, ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಆಚರಿಸಲು ತೆರಳಿದ್ದೀರಿ ಸಂತೋಷ. ಆ ಭಾಗಕ್ಕೆ ಹಿಂದುಳಿದ ಪ್ರದೇಶವೆಂಬ ಪಟ್ಟದಿಂದ ವಿಮೋಚನೆ ನೀಡುವ ಕೆಲಸಗಳನ್ನು ಮಾಡದಿರುವುದೇಕೆ. ಬಿಜೆಪಿ ಸರ್ಕಾರ ಅನುದಾನದಲ್ಲಿ, ಉದ್ಯೋಗದಲ್ಲಿ ನಿರಂತರ ಅನ್ಯಾಯ ಎಸಗುತ್ತಿರುವುದು ಏಕೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಪ್ರಶ್ನಿಸಿದೆ.
ಕಲ್ಬುರ್ಗಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಿ ಸ್ಥಳೀಯ 25 ಸಾವಿರ ಜನರಿಗೆ ಉದ್ಯೋಗ ದೊರಕಿಸುವ ಮಹತ್ತರ ಯೋಜನೆಗೆ ನಾನೇ ಶೀಘ್ರದಲ್ಲಿಯೇ ಅಡಿಗಲ್ಲು ಹಾಕಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಸಿಎಂ, ಕಲ್ಯಾಣ ಕರ್ನಾಟಕದ ಪ್ರದೇಶ ಎಂದರೇ ನನಗೆ ಅಚ್ಚುಮೆಚ್ಚು. ನನ್ನ ಹೃದಯಕ್ಕೆ ಹತ್ತಿರವಾದ ಪ್ರದೇಶವಾಗಿದೆ. ನವ ಕಲ್ಯಾಣ ಕರ್ನಾಟಕದಿಂದ ನವ ಕರ್ನಾಟಕ ನಿರ್ಮಾಣ, ನವ ಕರ್ನಾಟಕದಿಂದ ನವಭಾರತ ನಿರ್ಮಾಣ. ಇದು ನಮ್ಮ ಸರ್ಕಾರದ ಸಂಕಲ್ಪವಾಗಿದೆ ಎಂದು ಸಿಎಂ ಹೇಳಿದ್ದಾರೆ.

ಇದಕ್ಕೆ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ತಿರುಗೇಟು ನೀಡಿದ್ದು, ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮಾತನಾಡಿದ್ದ ಬಿಜೆಪಿ ಈಗ ಆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಆರ್ಟಿಕಲ್ 371ಜೆ ಕೋಶವನ್ನು ಕಲಬುರ್ಗಿಗೆ ಸ್ಥಳಾಂತರವನ್ನೂ ಮಾಡಲಿಲ್ಲ, ಬಸವರಾಜ ಬೊಮ್ಮಾಯಿ ಅವರೇ, ಇಷ್ಟು ದಿನ ನಿರ್ಲಕ್ಷಿಸಿ ಈಗ ಅಲ್ಲಿ ನಿಂತು ನಿಮ್ಮ ಯಾವ ಸಾಧನೆ ಹೇಳಿಕೊಳ್ಳುತ್ತೀರಿ?
ಕಲ್ಯಾಣ ಕರ್ನಾಟಕಕ್ಕೆ ಎಲ್ಲಾ ಬಗೆಯಲ್ಲೂ ಅನ್ಯಾಯ ಮಾಡಿದೆ ಬಿಜೆಪಿ ಸರ್ಕಾರ ಎಂದು ಆ ಭಾಗದ ಸ್ವತಃ ಬಿಜೆಪಿ ಶಾಸಕರೇ ಆಕ್ರೋಶ ವ್ಯಕ್ತ ಪಡಿಸಿದ್ದರು.ಜನರ ಮಾತಲ್ಲ, ಕನಿಷ್ಠ ಅವರದೇ ಪಕ್ಷದ ಶಾಸಕರ ಮಾತನ್ನೂ #KalyanaKarnatakaVirodhiBJPಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಯಾವ ಮುಖ ಇಟ್ಟುಕೊಂಡು ಕಾಲಿಟ್ಟಿದ್ದೀರಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದೆ.