ಸಿಕ್ಕಿಂನ ಲ್ಹೋನಕ್ ಸರೋವರದ ಹತ್ತಿರ ಪ್ರವಾಹ ಭೀತಿ ಮುಂದುವರೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಬಲಿಯಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, 100ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ.
ಮೇಘಸ್ಫೋಟ(Cloud Burst) ಉಂಟಾದ ಹಿನ್ನೆಲೆಯಲ್ಲಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಅಲ್ಲದೇ, ಆ ಪ್ರದೇಶದಲ್ಲಿ ಮುಂದಿನ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಕೂಡ ಹವಾಮಾನ ಇಲಾಖೆ ನೀಡಿದೆ. ಅಲ್ಲದೇ ನಾಪತ್ತೆಯಾಗಿದ್ದ 23 ಸೈನಿಕರ ಪೈಕಿ ಓರ್ವ ಸೈನಿಕರು ಮಾತ್ರ ಪತ್ತೆಯಾಗಿದ್ದು, ಇನ್ನುಳಿದ 22 ಜನರಿಗಾಗಿ ಸೇನೆಯ ತ್ರಿಶಕ್ತಿ ಕಾರ್ಪ್ಸ್ ಯೋಧರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸಿಂಗ್ಟಾಮ್ ಬಳಿಯ ಬುರ್ದಾಂಗ್‌ನಲ್ಲಿ ಮಣ್ಣಿನಲ್ಲಿ ಮುಳುಗಿರುವ ವಾಹನಗಳನ್ನು ರಕ್ಷಿಸಲು ಪ್ರಯತ್ನ ನಡೆಯುತ್ತಿದೆ. ಇಲ್ಲಿಯವರೆಗೆ ಪ್ರವಾಹಕ್ಕೆ ಸಿಲುಕಿದ್ದ ಜನರ ಪೈಕಿ 2,011 ಜನರನ್ನು ರಕ್ಷಿಸಲಾಗಿದ್ದು, ಉತ್ತರ ಸಿಕ್ಕಿಂನ ಲಾಚೆನ್, ಲಾಚುಂಗ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿಯರು ಸೇರಿದಂತೆ 3 ಸಾವಿರ ಪ್ರವಾಸಿಗರು ಸಿಕ್ಕಿಂನ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಪ್ರವಾಹವು ರಾಜ್ಯದಲ್ಲಿ 11 ಸೇತುವೆಗಳನ್ನು ನಾಶಪಡಿಸಿದೆ, ಅದರಲ್ಲಿ ಎಂಟು ಸೇತುವೆಗಳು ಮಂಗನ್ ಜಿಲ್ಲೆಯೊಂದರಲ್ಲಿ ಕೊಚ್ಚಿಹೋಗಿವೆ.