5 ಸುಲಭ ಮತ್ತು ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
1. ಈರುಳ್ಳಿ ಕಚೋರಿ
ಬೇಕಾಗುವ ಸಾಮಗ್ರಿಗಳು
ಈರುಳ್ಳಿ – 2
ಕಡಲೆ ಹಿಟ್ಟು – 2 ಚಮಚ
ಮೈದಾ – 2 ಕಪ್
ಓಮಕಾಳು ಸ್ವಲ್ಪ
ಇಂಗು ಸ್ವಲ್ಪ
ಎಣ್ಣೆ
ಆಲೂಗಡ್ಡೆ – 2
ಮೆಣಸಿನ ಪುಡಿ – 1/2 ಚಮಚ
ದನಿಯಾ ಪುಡಿ – 1/2 ಚಮಚ
ಅರಿಶಿನ – 1/4 ಚಮಚ
ಜೀರಿಗೆ – 1/2 ಚಮಚ
ಸೋಂಪು – 1/2 ಚಮಚ
ಹಸಿ ಮೆಣಸಿನಕಾಯಿ 2
ಉಪ್ಪು
ಮಾಡುವ ವಿಧಾನ
ಮೊದಲಿಗೆ ಮೈದಾಕ್ಕೆ ಉಪ್ಪು, ಓಮಕಾಳು, 3 ಚಮಚ ಎಣ್ಣೆ ಸೇರಿಸಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ. ನಂತರ 30 ನಿಮಿಷಗಳ ಕಾಲ ಹಾಗೆ ಬಿಡಿ.
ಈಗ ಈರುಳ್ಳಿಗಳನ್ನು ಚಿಕ್ಕದಾಗಿ ಕತ್ತರಿಸಿ. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಜೀರಿಗೆ, ಸೋಂಪು(fennel seed), ಇಂಗು ಮತ್ತು ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಕೆಂಪು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಕೆಂಪು ಮೆಣಸಿನ ಪುಡಿ, ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಬೆರೆಸಿ. ಬಳಿಕ ದನಿಯಾ ಹುಡಿ, ಅರಿಶಿನ, ಉಪ್ಪು ಮತ್ತು ಬೇಯಿಸಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಬೆರೆಸಿ. ಇದಕ್ಕೆ ಕಡಲೆ ಹಿಟ್ಟು ಸೇರಿಸಿ ಹುರಿಯಿರಿ.. ಎಲ್ಲವೂ ಸರಿಯಾಗಿ ಮಿಶ್ರವಾದ ಬಳಿಕ ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ.
ಈಗ ಚೆನ್ನಾಗಿ ನಾದಿರುವ ಮೈದಾಹಿಟ್ಟಿನಲ್ಲಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಸ್ವಲ್ಪ ದಪ್ಪಗೆ ಲಟ್ಟಿಸಿಕೊಳ್ಳಿ. ಈಗ ಅದರಲ್ಲಿ ಈರುಳ್ಳಿ ಮಸಾಲೆ ತುಂಬಿ ಅಂಚುಗಳನ್ನು ಒಟ್ಟಿಗೆ ಸೇರಿಸಿ ಮೆಲ್ಲಗೆ ಲಟ್ಟಿಸಿಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಡಿಮೆ ಉರಿಯಲ್ಲಿ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
2. ಸಬ್ಬಕ್ಕಿ ರವಾ ಇಡ್ಲಿ
ಬೇಕಾಗುವ ಸಾಮಾಗ್ರಿಗಳು
ಸಬ್ಬಕ್ಕಿ – 1ಕಪ್
ರವೆ – 1ಕಪ್
ಸಾಸಿವೆ -1/2 ಚಮಚ
ಕಡಲೆಬೇಳೆ – 1/2 ಚಮಚ
ಕರಿಬೇವು – ಸ್ವಲ್ಪ
ಹಸಿಮೆಣಸಿನಕಾಯಿ – 2
ಶುಂಠಿ ತುರಿ – 1/2ಚಮಚ
ಕೊತ್ತಂಬರಿಸೊಪ್ಪು – ಸ್ವಲ್ಪ
ಮೊಸರು – 1/2 ಕಪ್
ಅಡುಗೆ ಸೋಡಾ – ಚಿಟಿಕೆಯಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲಿಗೆ ಸಬ್ಬಕ್ಕಿಗೆ ಮುಳುಗುವಷ್ಟು ನೀರು ಹಾಕಿ 1 ಗಂಟೆಗಳ ಕಾಲ ನೆನೆ ಹಾಕಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಕಡಲೆಬೇಳೆ ಸೇರಿಸಿ ಹುರಿಯಿರಿ. ಬಳಿಕ ಚಿಕ್ಕದಾಗಿ ಕತ್ತರಿಸಿದ ಕರಿಬೇವು, ಹಸಿಮೆಣಸಿನಕಾಯಿ, ಶುಂಠಿ ತುರಿ ಸೇರಿಸಿ ಬಾಡಿಸಿಕೊಳ್ಳಿ. ನಂತರ ರವೆಯನ್ನು ಸೇರಿಸಿ ಮಂದ ಉರಿಯಲ್ಲಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಒಲೆಯಿಂದ ಕೆಳಗಿಳಿಸಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿಸೊಪ್ಪು, ನೆನೆಸಿದ ಸಬ್ಬಕ್ಕಿ, ಮೊಸರು, ಉಪ್ಪು, ಅಡುಗೆ ಸೋಡಾ, ಅಗತ್ಯವಿರುವಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. 1 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಎಣ್ಣೆ ಸವರಿದ ಇಡ್ಲಿ ಪ್ಲೇಟ್ಗಳಲ್ಲಿ ಹಿಟ್ಟನ್ನು ತುಂಬಿ 10 -15 ನಿಮಿಷ ಹಬೆಯಲ್ಲಿ ಬೇಯಿಸಿದರೆ ರುಚಿಯಾದ ಬಿಸಿ ಬಿಸಿ ಸಬ್ಬಕ್ಕಿ ರವಾ ಇಡ್ಲಿ ಸವಿಯಲು ಸಿದ್ಧ.
3. ವೆಜ್ ಪನೀರ್ ಫ್ರೈಡ್ ರೈಸ್
ಬೇಕಾಗುವ ಸಾಮಾಗ್ರಿಗಳು
ಅಕ್ಕಿ – 1 ಕಪ್
ಪನೀರ್ – ಸ್ವಲ್ಪ
ಬೀನ್ಸ್ – 10
ಕ್ಯಾರೆಟ್ – 1
ಆಲೂಗಡ್ಡೆ -2
ಮ್ಯಾಗಿ ಮಸಾಲಾ – ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ – 2 ಚಮಚ
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ತೊಳೆದು ಆನ್ನ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ/ತುಪ್ಪ ಹಾಕಿ ಬಿಸಿ ಮಾಡಿ.ನಂತರ ಚಿಕ್ಕದಾಗಿ ಕತ್ತರಿಸಿದ ಬೀನ್ಸ್, ಕ್ಯಾರೆಟ್, ಆಲೂಗಡ್ಡೆ ಸೇರಿಸಿ ಹುರಿಯಿರಿ. ಬಳಿಕ ಪನೀರ್ ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮ್ಯಾಗಿ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಈಗ ಇದಕ್ಕೆ ಮಾಡಿಟ್ಟುಕೊಂಡ ಅನ್ನವನ್ನು ಹಾಕಿ ಕಲಸಿದರೆ ವೆಜ್ ಪನೀರ್ ಫ್ರೈಡ್ ರೈಸ್ ಸವಿಯಲು ಸಿದ್ಧ.
4. ಅಕ್ಕಿ ರೊಟ್ಟಿ
ಬೇಕಾಗುವ ಸಾಮಾಗ್ರಿಗಳು
ಅಕ್ಕಿ ಹಿಟ್ಟು – 1 ಕಪ್
ನೀರು – 2 ಕಪ್
ತುಪ್ಪ – 1 ಚಮಚ
ಜೀರಿಗೆ ಪುಡಿ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ನೀರನ್ನು ಕುದಿಸಿ. ಈ ಕುದಿಯುವ ನೀರಿಗೆ
ತುಪ್ಪ, ಉಪ್ಪು ಮತ್ತು ಜೀರಿಗೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಕದಡಿ. ಈಗ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಅಕ್ಕಿ ಹಿಟ್ಟನ್ನು ಕುದಿಯುವ ನೀರಿಗೆ ಸೇರಿಸುತ್ತಾ, ಕಲಸುತ್ತಾ ಇರಿ. ನಂತರ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ. ನಂತರ ಕೆಳಗಿಳಿಸಿ ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಈಗ ಕೈಯನ್ನು ಸ್ವಲ್ಪ ನೀರಲ್ಲಿ ಒದ್ದೆ ಮಾಡಿ, ಹಿಟ್ಟನ್ನು ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ನಾದಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಇಡಿ. ಇದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಉದುರಿಸಿ ರೊಟ್ಟಿಯನ್ನು ಲಟ್ಟಿಸಿಕೊಳ್ಳಿ.
ಈಗ ತವಾವನ್ನು ಬಿಸಿ ಮಾಡಿ ಎಣ್ಣೆ ಸವರಿ ರೊಟ್ಟಿಯ ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ ತೆಗೆಯಿರಿ. ಬಿಸಿ ಬಿಸಿಯಾದ ಅಕ್ಕಿ ರೊಟ್ಟಿ ಸವಿಯಲು ಸಿದ್ಧವಾಗಿದೆ.
5. ವೆಜಿಟೇಬಲ್ ದೋಸೆ
ಬೇಕಾಗುವ ಸಾಮಾಗ್ರಿಗಳು
ದೋಸೆ ಅಕ್ಕಿ – 1 ಕಪ್
ಉದ್ದಿನಬೇಳೆ – 1/4 ಕಪ್
ಬೇಯಿಸಿದ ಆಲೂಗಡ್ಡೆ – 1
ಮೊಸರು – 1 ಕಪ್
ಈರುಳ್ಳಿ – 1
ಟೊಮೆಟೋ – 1
ಕ್ಯಾರೆಟ್ – 1
ಸೋಡಾ ಹುಡಿ – ಚಿಟಿಕೆಯಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು
ಅಗತ್ಯವಿರುವಷ್ಟು ನೀರು
ಮಾಡುವ ವಿಧಾನ
ಮೊದಲಿಗೆ ಅಕ್ಕಿ ಮತ್ತು ಉದ್ದಿನಬೇಳೆಯನ್ನು 3 – 4 ಗಂಟೆಗಳ ಕಾಲ ನೆನೆ ಹಾಕಿ. ನಂತರ ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣಕ್ಕೆ ಉಪ್ಪು, ಸೋಡಾ ಹುಡಿ, ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೋ, ತುರಿದ ಕ್ಯಾರೆಟ್, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು ಸೇರಿಸಿ ಚೆನ್ನಾಗಿ ಕಲಸಿ. ಅಗತ್ಯವಿರುವಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ನಂತರ ತವಾವನ್ನು ಬಿಸಿ ಮಾಡಿ ದೋಸೆ ಹಿಟ್ಟನ್ನು ಹುಯ್ಯಿರಿ. ಎಣ್ಣೆ ಹಾಕಿ ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ ತೆಗೆಯಿರಿ. ಕಾಯಿ ಚಟ್ನಿ ಜೊತೆ ವೆಜಿಟೇಬಲ್ ದೋಸೆ ಸವಿಯಿರಿ.