ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿಗೆ ರಜೆ
ಹಾಸನ : ಹಾಸನದ ಖಾಸಗಿ ಇಂಜಿನಿಯರ್ ಕಾಲೇಜಿನಲ್ಲಿ ಕೊರೊನಾ ಸ್ಫೋಟ ಹಿನ್ನೆಲೆಯಲ್ಲಿ ಕಾಲೇಜಿಗೆ ಒಂದು ವಾರದ ಕಾಲ ರಜೆ ಘೋಷಣೆ ಮಾಡಲಾಗಿದೆ.
ಹೀಗಾಗಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಊರುಗಳತ್ತ ಪಯಣ ಬೆಳೆಸುತ್ತಿದ್ದಾರೆ.
ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ 21 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿತ್ತು.
ಹೀಗಾಗಿ ಇಂದು ಕಾಲೇಜಿನ ಎಲ್ಲಾ ಸಿಬ್ಬಂದಿಗಳಿಗೂ ಆರೋಗ್ಯ ಇಲಾಖೆ ಕೋವಿಡ್ ಟೆಸ್ಟ್ ಮಾಡಿದೆ.
ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರಿರುವ ಕಾಲೇಜಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೂ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ಡಿಎಚ್ ಓಗೆ ಪತ್ರ ಬರೆದಿದ್ದರು.
ಈ ಪತ್ರವನ್ನು ಪರಿಶೀಲಿಸಿರುವ ಅಧಿಕಾರಿಗಳು, ಕಾಲೇಜಿನಲ್ಲಿ ಕೊರೊನಾ ಟೆಸ್ಟ್ ಮಾಡುತ್ತಿದ್ದಾರೆ.
ಇತ್ತ ಜಿಲ್ಲೆಯಲ್ಲಿ ಹಲವು ಶಾಲಾ ಕಾಲೇಜುಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಜಿಲ್ಲೆಯ 12 ಪ್ರಾಥಮಿಕ ಶಾಲೆ, 10 ಪ್ರೌಢಶಾಲೆ ಸೇರಿದಂತೆ ಒಟ್ಟು 22 ಶಾಲೆಯ 73 ಮಕ್ಕಳಿಗೆ ಕೊರೊನಾ ದೃಢಪಟ್ಟಿದೆ. ಒಟ್ಟು 19 ಶಾಲೆಯ 30 ಶಿಕ್ಷಕರಿಗೆ ಹೆಮ್ಮಾರಿ ಸೋಂಕು ವಕ್ಕರಿಸಿದೆ.