ಬಾಲಿವುಡ್ ನಟ ಅಮಿರ್ ಖಾನ್ ಕಚೇರಿಯ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು
ಮುಂಬೈ, ಜೂನ್ 30: ಬಾಲಿವುಡ್ ನಟ ಅಮಿರ್ ಖಾನ್ ಅವರ ಕಚೇರಿಯ ಕೆಲವು ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಅಮಿರ್ ಖಾನ್ ಹೇಳಿದ್ದಾರೆ.
ಬಾಲಿವುಡ್ ನಟ ಅಮಿರ್ ಖಾನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನನ್ನ ಕೆಲವು ಸಿಬ್ಬಂದಿಗಳು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬಿಎಂಸಿ ಅಧಿಕಾರಿಗಳು ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಿದಾಗ ಕೆಲವರಲ್ಲಿ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. ನಮ್ಮ ಸಿಬ್ಬಂದಿಗಳೊಂದಿಗೆ ನಾನು ಮತ್ತು ನನ್ನ ಕುಟುಂಬವೂ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ವರದಿ ನೆಗೆಟಿವ್ ಎಂದು ಬಂದಿದೆ. ತಾಯಿಯ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದು ಅವರ ವರದಿಯೂ ನೆಗೆಟಿವ್ ಬರಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಬರೆದಿದ್ದಾರೆ.