ಪಾಕಿಸ್ತಾನ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಗೆ ಕೊರೊನಾ ಸೋಂಕು
ಇಸ್ಲಾಮಾಬಾದ್, ಜುಲೈ 5: ಪಾಕಿಸ್ತಾನ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಸಚಿವ ಶಾ ಮೆಹಮೂದ್ ಖುರೇಷಿ ಶುಕ್ರವಾರ ಮಾಹಿತಿ ನೀಡಿದ್ದು, ತಮಗೆ ಕೊರೊನಾ ಸೋಂಕು ತಗುಲಿರುವುದನ್ನು ಖಚಿತಪಡಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ತನಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದು, ಕೂಡಲೇ ಮನೆಯಲ್ಲಿಯೇ ತನ್ನನ್ನು ತಾನೇ ನಿರ್ಬಂಧಿಸಿಕೊಂಡೆ. ಬಳಿಕ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಂಡಿದ್ದು, ಪರೀಕ್ಷಾ ವರದಿಗಳು ಕೊರೊನಾ ಸೋಂಕು ತಗುಲಿರುವುದನ್ನು ಖಚಿತಪಡಿಸಿದೆ ಎಂದು ಷಾ ಮೆಹಮೂದ್ ಖುರೇಷಿ ಹೇಳಿದ್ದಾರೆ. ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾಗಿರುವುದಾಗಿ ತಿಳಿಸಿರುವ ಶಾ ಮೆಹಮೂದ್ ಖುರೇಷಿ ಮನೆಯಿಂದಲೇ ತನ್ನ ಕರ್ತವ್ಯವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಬಗ್ಗೆ ಯು.ಎಸ್. ವಿಶೇಷ ಪ್ರತಿನಿಧಿ ಜಲ್ಮೇ ಖಲೀಲ್‌ಜಾದ್ ಅವರೊಂದಿಗೆ ಉನ್ನತ ಮಟ್ಟದ ಸಭೆಗಳಲ್ಲಿ ಪಾಲ್ಗೊಂಡ ಕೆಲವು ದಿನಗಳ ಬಳಿಕ ತನಗೆ ಕೊರೊನಾ ಸೋಂಕು ತಗುಲಿರುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಹೇಳಿದ್ದಾರೆ.

ಇತ್ತೀಚೆಗೆ ಖುರೇಷಿ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಕೂಡ ಸಂಸತ್ತಿನಲ್ಲಿ ಮತ್ತು ಬುಧವಾರ ನಡೆದ ಸಂಪುಟ ಸಭೆಯಲ್ಲಿ ಕೂಡ ಭಾಗವಹಿಸಿದ್ದರು. ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವರು
“ಈ ಮಧ್ಯಾಹ್ನ ನನಗೆ ಸ್ವಲ್ಪ ಜ್ವರದ ಅನುಭವವಾಯಿತು ಮತ್ತು ತಕ್ಷಣ ನನ್ನನ್ನು ಮನೆಯಲ್ಲಿಯೇ ನಿರ್ಬಂಧಿಸಿದೆ. ಬಳಿಕ ಕೋವಿಡ್ 19 ಪರೀಕ್ಷೆಗೆ ಒಳಗಾದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲಾಹನ ಕೃಪೆಯಿಂದ ನಾನು ಬಲಶಾಲಿ ಮತ್ತು ಶಕ್ತಿಯುತನಾಗಿರುತ್ತೇನೆ. ನಾನು ಮನೆಯಿಂದ ನನ್ನ ಕರ್ತವ್ಯಗಳನ್ನು ಮುಂದುವರಿಸುತ್ತೇನೆ. ದಯವಿಟ್ಟು ನಿಮ್ಮ ಪ್ರಾರ್ಥನೆಯಲ್ಲಿ ನನಗಾಗಿ ಪ್ರಾರ್ಥಿಸಿ” ಎಂದು ಬರೆದಿದ್ದಾರೆ








