ಕೋವಿಡ್ ಅಪ್ಡೇಟ್ – ಸತತ 2ನೇ ದಿನ 7 ಸಾವಿರ ಕೋವಿಡ್ ಕೇಸ್ ಗಳು ಪತ್ತೆ…
ಕರೋನಾದ 4 ಅಲೆಯ ಆತಂಕದ ನಡುವೆ ದೇಶಾದ್ಯಂತ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸತತ ಎರಡನೇ ದಿನ 7000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.
ಆರೋಗ್ಯ ಸಚಿವಾಲಯದ ನವೀಕರಿಸಿದ ಅಂಕಿ ಅಂಶಗಳ ಪ್ರಕಾರ ಗುರುವಾರ ದೇಶದಲ್ಲಿ 7,584 ರೋಗಿಗಳು ಪತ್ತೆಯಾಗಿದ್ದು, 24 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 4 ಕೋಟಿ 32 ಲಕ್ಷ 5 ಸಾವಿರದ 106ಕ್ಕೆ ಏರಿಕೆಯಾಗಿದೆ. ಕರೋನಾ ಸೋಂಕಿನಿಂದ ಇದುವರೆಗೆ 5 ಲಕ್ಷ 24 ಸಾವಿರದ 747 ಜನರು ಸಾವನ್ನಪ್ಪಿದ್ದಾರೆ.
ಇದಕ್ಕೂ ಮುನ್ನ ಬುಧವಾರ ದೇಶದಲ್ಲಿ 7,240 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 7 ದಿನಗಳ ಟ್ರೆಂಡ್ ನೋಡಿದರೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಜೂನ್ 3 ರಂದು, ದೇಶದಲ್ಲಿ ಕೇವಲ 3945 ಪಾಸಿಟಿವ್ ಇತ್ತು. ಈಗ ಈ ಸಂಖ್ಯೆ 7,584ಕ್ಕೆ ಏರಿಕೆಯಾಗಿದೆ.
ಹೊಸ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮತ್ತೆ ಅಗ್ರಸ್ಥಾನದಲ್ಲಿದೆ, 24 ಗಂಟೆಗಳಲ್ಲಿ 2,813 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ
ದೇಶದಲ್ಲಿ ನಾಲ್ಕನೇ ಅಲೆಯ ಅಪಾಯ ಕಡಿಮೆ
ಇದೀಗ ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ ಸಾಧ್ಯತೆ ತೀರಾ ಕಡಿಮೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಮ್ಯಾಕ್ಸ್ ಹೆಲ್ತ್‌ಕೇರ್‌ನ ನಿರ್ದೇಶಕ ಡಾ.ರೊಮ್ಮೆಲ್ ಟಿಕ್ಕು ಮಾತನಾಡಿ, ಕರೋನದ ಹೊಸ ರೂಪಾಂತರವು ಹೊರಹೊಮ್ಮದಿದ್ದರೆ ನಾಲ್ಕನೇ ಅಲೆಯ ಅಪಾಯವಿಲ್ಲ ಎಂದಿದ್ದಾರೆ.