ಕುತೂಹಲ ಮೂಡಿಸಿರುವ ಸಚಿವ ಸುಧಾಕರ್ ಟ್ವೀಟ್
ಬೆಂಗಳೂರು, ಜೂನ್ 28: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಹೋಂ ಕ್ವಾರಂಟೈನ್ ನಲ್ಲಿರುವ ಹಿನ್ನಲೆಯಲ್ಲಿ ಕೋವಿಡ್-19 ಉಸ್ತುವಾರಿ ಸಚಿವ ಆರ್. ಅಶೋಕ್ ಅವರಿಗೆ ವಹಿಸಲಾಗಿದೆ.
ಇದೀಗ ಸಚಿವ ಸುಧಾಕರ್ ಅವರು ಮಾಡಿರುವ ಟ್ವೀಟ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸುಧಾಕರ್ ‘ಭಾನುವಾರದ ಚಿಂತನೆ’ ಎಂದು ಅವರು ಶಾಲಾ ದಿನಗಳಲ್ಲಿ ಓದಿರುವ ಕಥೆಯೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಸುಧಾಕರ್
ಭಾನುವಾರದ ಚಿಂತನೆ : ನಾನು ನನ್ನ ಶಾಲಾ ದಿನಗಳಲ್ಲಿ ಓದಿದ ಕಥೆಯೊಂದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಕಥೆಯ ನೀತಿಯೇನು ಎಂದರೆ, ನಮ್ಮ ಕರ್ತವ್ಯವನ್ನು ನಾವು ಆತ್ಮಸಾಕ್ಷಿಗೆ ಸರಿಯಾಗಿ ಮತ್ತು ಒಳ್ಳೆಯ ಉದ್ದೇಶದಿಂದ ಮಾಡಬೇಕು. ನಾನು ನಾಯಕತ್ವ ಎನ್ನುವುದು ಒಂದು ಸ್ಥಾನವಲ್ಲ, ಆದರೆ ಅದು ಒಂದು ಕಾರ್ಯ ಎಂದು ನಂಬಿದ್ದೇನೆ ಎಂದು ಅವರು ಬರೆದಿದ್ದಾರೆ.
ಈ ನಡುವೆ ಖಾಸಗಿ ಆಸ್ಪತ್ರೆಗಳ ಸಭೆ ನಡೆಸುವ ವಿಚಾರದಲ್ಲಿ ಸುಧಾಕರ್ ಮತ್ತು ಅಶೋಕ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಟ್ವೀಟ್ ಮೂಲಕ ಆಶೋಕ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿರಬಹುದಾ ಎಂಬ ಚರ್ಚೆ ನಡೆಯುತ್ತಿದೆ. ಸಚಿವ ಸುಧಾಕರ್ ಖಾಸಗಿ ಆಸ್ಪತ್ರೆಗಳ ಜೊತೆಗೆ ಸಭೆ ನಡೆಸಲು ತಯಾರಿದ್ದರೂ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ತಾನೇ ಮೀಟಿಂಗ್ ನಡೆಸುತ್ತೇನೆ ಎಂದು ಅಶೋಕ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸುಧಾಕರ್ ಅವರ ಟ್ವೀಟ್ ಬಹಳ ಕುತೂಹಲಕ್ಕೆ ಕಾರಣವಾಗಿದೆ.