ನೆದರ್ಲೆಂಡ್ಸ್ ತಂಡದ ಆಲ್ರೌಂಡರ್ ಬಾಸ್ ಡಿ ಲೀಡೆ(4/62) ಪಾಕಿಸ್ತಾನದ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ಅಲ್ಲದೇ ಈ ಪ್ರದರ್ಶನದ ಮೂಲಕ 20 ವರ್ಷದ ಹಿಂದಿನ ತಮ್ಮ ತಂದೆಯ ಶ್ರೇಷ್ಠ ಬೌಲಿಂಗ್ ಪ್ರದರ್ಶನವನ್ನ ನೆನಪಿಸಿದ್ದಾರೆ.
ಹೈದ್ರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಸ್ ಡಿ ಲೀಡೆ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ನಿರ್ಣಾಯಕ ಹಂತದಲ್ಲಿ ತಂಡಕ್ಕೆ ಆಸರೆಯಾದ ಡಚ್ ಆಲ್ರೌಂಡರ್, ಪಾಕಿಸ್ತಾನದ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.
ಪ್ರಮುಖವಾಗಿ ಉತ್ತಮ ಫಾರ್ಮ್‌ನಲ್ಲಿದ್ದ ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಶದಾಬ್ ಖಾನ್ ಹಾಗೂ ಹಸನ್ ಅಲಿ ಅವರುಗಳ ವಿಕೆಟ್ ಪಡೆಯುವಲ್ಲಿ ಬಾಸ್ ಡಿ ಲೀಡೆ ಯಶಸ್ವಿಯಾದರು. ಇವರ ಈ ಪ್ರದರ್ಶನದ ನೆರವಿನಿಂದ ನೆದರ್ಲೆಂಡ್ಸ್ ತಂಡ, 49 ಓವರ್‌ಗಳಲ್ಲಿ 286 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.
ಅಪ್ಪನ ಆಟದ ನೆನಪು:
ಪಾಕಿಸ್ತಾನದ ವಿರುದ್ಧ ಬಾಸ್ ಡಿ ಲೀಡೆ ನೀಡಿದ ಉತ್ತಮ ಬೌಲಿಂಗ್ ಪ್ರದರ್ಶನ, 20 ವರ್ಷಗಳ ಹಿಂದೆ ಅವರ ತಂದೆ ಟಿಮ್ ಡಿ ಲೀಡೆ ಅವರು ನೀಡಿದ್ದ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನ ನೆನಪಿಸಿತು. 2003ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ಪರವಾಗಿ ಆಡಿದ್ದ ಟಿಮ್ ಡಿ ಲೀಡೆ, 9.5 ಓವರ್‌ಗಳಲ್ಲಿ 35 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದರು.
ಪ್ರಮುಖವಾಗಿ ಭಾರತದ ಸ್ಟಾರ್ ಬ್ಯಾಟರ್‌ಗಳಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರ ಜೊತೆಗೆ ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್ ಅವರ ವಿಕೆಟ್ ಪಡೆದು ಮಿಂಚಿದ್ದರು. ಇವರ ಈ ಶ್ರೇಷ್ಠ ಬೌಲಿಂಗ್ ಪ್ರದರ್ಶನದಿಂದ ಭಾರತ 206 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದ ನೆದರ್ಲೆಂಡ್ಸ್, 136 ರನ್‌ಗಳಿಗೆ ಆಲೌಟ್ ಆಗಿ ಸೋಲಿನ ಆಘಾತ ಕಂಡಿತ್ತು. ಭಾರತದ ಪರ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ತಲಾ 4 ವಿಕೆಟ್ ಪಡೆದಿದ್ದರು.