ಪ್ರಸಕ್ತ ಏಕದಿನ ವಿಶ್ವಕಪ್-2023 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಮೊದಲ ತಂಡವಾಗಿ ಟೂರ್ನಿಯ ಫೈನಲ್ ಪ್ರವೇಶಿಸಿದ್ದು, ನವೆಂಬರ್ 19ರಂದು ನಡೆಯುವ ಫೈನಲ್ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ.
ಟೂರ್ನಿಯ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿರುವ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದೆ. ಇನ್ನೂ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿರುವ ವಿರಾಟ್ ಕೊಹ್ಲಿ ಕೂಡ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಧಾರವಾಗಿದ್ದಾರೆ. ಇದೀಗ ವಿಶ್ವಕಪ್ ಫೈನಲ್ ಪಂದ್ಯವನ್ನ ಎದುರು ನೋಡುತ್ತಿರುವ ಕಿಂಗ್ ಕೊಹ್ಲಿ, ಐಸಿಸಿ ಫೈನಲ್‌ಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಈವರೆಗೂ ಆರು ಐಸಿಸಿ ಫೈನಲ್ ಪಂದ್ಯಗಳನ್ನ ಆಡಿದ್ದಾರೆ. ಇದರಲ್ಲಿ 35ರ ಸರಾಸರಿಯಲ್ಲಿ 280 ರನ್ ಕಲೆಹಾಕಿದ್ದು, 77 ರನ್‌ಗಳು ಕೊಹ್ಲಿ ಅವರ ಗರಿಷ್ಠ ಸ್ಕೋರ್ ಆಗಿದೆ. ಇನ್ನೂ ಐಸಿಸಿ ಏಕದಿನ ಪಂದ್ಯಗಳಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 27.66ರ ಸರಾಸರಿಯಲ್ಲಿ 83 ರನ್‌ಗಳಿಸಿದ್ದಾರೆ. 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ 43 ರನ್‌ಗಳಿಸಿದ್ದು, ಕೊಹ್ಲಿ ಅವರ ಈವರೆಗಿನ ಗರಿಷ್ಠ ಸ್ಕೋರ್ ಆಗಿದೆ.
ಪ್ರಸಕ್ತ ವಿಶ್ವಕಪ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ವಿಶ್ವಕಪ್ ಆವೃತ್ತಿಯಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಸಿದ 6ನೇ ಬ್ಯಾಟರ್ ಆಗಿದ್ದಾರೆ. ಹೀಗಾಗಿ ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್‌ಗಳಿಸಿರುವ ಕೊಹ್ಲಿ, ಮತ್ತೊಂದು ಐಸಿಸಿ ಫೈನಲ್‌ಗಾಗಿ ಸಜ್ಜಾಗಿದ್ದು, ಟೀಂ ಇಂಡಿಯಾಕ್ಕೆ ಯಶಸ್ಸು ತಂದುಕೊಡುವ ನಿರೀಕ್ಷೆ ಮೂಡಿಸಿದ್ದಾರೆ.
CWC 2023, Virat Kohli, Team India, World Cup, ODI Cricket