ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ತುಟ್ಟಿಭತ್ಯೆ 3% ಹೆಚ್ಚಳ ಸಾಧ್ಯತೆ
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಅಥವಾ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಹೆಚ್ಚುತ್ತಿರುವ ಇಂಧನ ಮತ್ತು ತೈಲ ಬೆಲೆಗಳು ಮತ್ತು ಹಣದುಬ್ಬರದ ಪರಿಣಾಮವನ್ನ ಕಡಿಮೆ ಮಾಡಲು ತುಟ್ಟಿಭತ್ಯೆ ಅಗತ್ಯ ಪರಿಹಾರವನ್ನು ಒದಗಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಾರ್ಚ್ 30 ರಂದು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಖಚಿತಪಡಿಸಿವೆ.
ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಡಿಎ ಪರಿಷ್ಕರಣೆಯು ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿತ್ತು. ಜುಲೈ, 2021 ರಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ದೀರ್ಘ ವಿರಾಮದ ನಂತರ ಶೇಕಡಾ 17 ರಿಂದ ಶೇಕಡಾ 28 ಕ್ಕೆ ಏರಿಸಲಾಗಿದೆ. ಅಕ್ಟೋಬರ್, 2021 ರಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ 3% ನಷ್ಟು ತುಟ್ಟಿಭತ್ಯೆ ಏರಿಕೆ ಮಾಡಲಾಗಿತ್ತು.
ಏರುತ್ತಿರುವ ಹಣದುಬ್ಬರವನ್ನು ನಿಭಾಯಿಸಲು ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್‌ನಲ್ಲಿ ಶೇಕಡಾ 3 ರಷ್ಟು ಹೆಚ್ಚಳವನ್ನು ಘೋಷಿಸಲಿದೆ. ನಂತರ ತುಟ್ಟಿಭತ್ಯೆ ಮೂಲ ವೇತನದ ಶೇ.34ಕ್ಕೆ ಏರಿಕೆಯಾಗಲಿದೆ. ಈ ನಿರ್ಧಾರದಿಂದ 50 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.